
ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea Ltd) ಕಂಪನಿಯಲ್ಲಿ ಈಗ ಭಾರತ ಸರ್ಕಾರ (Indian Government) ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.
ಹೌದು. ಭಾರತ ಸರ್ಕಾರ ಷೇರುಗಳನ್ನು (Share) ಖರೀದಿಸಿಲ್ಲ. ಬದಲಾಗಿ ವಿಐಎಲ್ (VIL) ಕಂಪನಿಯೇ ಶೇ.33.14 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದೆ.
ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (Adjusted Gross Revenue -AGR) ಪಾವತಿಸಬೇಕಿದೆ. ಅಂದಾಜಿನ ಪ್ರಕಾರ ಕಂಪನಿ ಬಡ್ಡಿಯ ಮೊತ್ತವಾಗಿ ಸುಮಾರು 16,133 ಕೋಟಿ ರೂ. ಪಾವತಿಸಬೇಕಿದೆ. ಇಷ್ಟೊಂದು ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಬಳಿ ಇರುವ ಷೇರನ್ನೇ ಮಾರಾಟ ಮಾಡಲು ಆಡಳಿತ ಮಂಡಳಿ ಕಳೆದ ವರ್ಷದ ಜನವರಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು.
ವೊಡಾಫೋನ್ ಕಂಪನಿಯ ನಿರ್ಧಾರವನ್ನು ಈಗ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಸ್ಪೆಕ್ಟ್ರಂ ಹ೦ಚಿಕೆ ಮತ್ತು ಇತರ ಬಾಕಿಗಳ ಮೇಲಿನ ಬಡ್ಡಿಯನ್ನು ಕೇಂದ್ರ ಸರ್ಕಾರ ಷೇರಾಗಿ ಪರಿವರ್ತಿಸಿದೆ. ಈ ಮೂಲಕ ಸರ್ಕಾರ ಶೇ.33.14ರಷ್ಟು ಪಾಲನ್ನು ತನ್ನದಾಗಿಸಿಕೊಂಡು ಈ ಟೆಲಿಕಾಂ ಸಂಸ್ಥೆಯಲ್ಲಿ ಅತಿದೊಡ್ಡ ಷೇರುದಾರನಾಗಿ ಹೊರಹೊಮ್ಮಿದೆ.
16,000 ಕೋಟಿ ರೂ. ಬಡ್ಡಿ ಮೊತ್ತ ಪಾವತಿ ಸಂಬಂಧ ಸರ್ಕಾರಕ್ಕೆ 10 ರೂ. ಮುಖಬೆಲೆಗೆ ಪ್ರತಿ ಷೇರನ್ನು ಮಾರಾಟ ವಿಐಎಲ್ ಕಂಪನಿ ಮಾರಾಟ ಮಾಡಿದೆ. ಶುಕ್ರವಾರದ ಮಾರುಕಟ್ಟೆಯಲ್ಲಿ ವೊಡಾಫೋನ್ ಐಡಿಯಾ 1 ಷೇರಿನ ಬೆಲೆ 7 ರೂ.ಗೆ ಅಂತ್ಯವಾಗಿತ್ತು.
ಈ ಹಿಂದೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ (Kumar Mangalam Birla) ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಬಿರ್ಲಾ ಅವರು ಕಂಪನಿಯಲ್ಲಿ ಶೇ. 27ರಷ್ಟು ಷೇರು ಹೊಂದಿದ್ದಾರೆ.
ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ 2021ರ ಜೂನ್ 7ರಂದು ಪತ್ರ ಬರೆದಿದ್ದರು. ಸರ್ಕಾರ ಮಾತ್ರ ಅಲ್ಲದೇ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ಪ್ರಕಟಿಸಿದ್ದರು.
ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್‌ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.