
ಅಸ್ಸಾಂ ರಾಜ್ಯ ಸರ್ಕಾರ (Assam Government) ಬಾಲ್ಯ ವಿವಾಹ (Child Marriage) ತಡೆಗೆ ಕೈಗೊಂಡಿರುವ ಕಠಿಣ ಕ್ರಮದಿಂದ ನಲುಗಿಹೋಗಿರುವ ಹೆಣ್ಣುಮಕ್ಕಳನ್ನ ಯಾರು ನೋಡಿಕೊಳ್ಳುತ್ತಾರೆ? ಜೈಲಿಗೆ ಹೋದವರ ಹೆಂಡತಿಯರು ಹಾಗೂ ಮಕ್ಕಳನ್ನ ಸಿಎಂ ನೋಡಿಕೊಳ್ತಾರಾ? ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರನ್ನ ಪ್ರಶ್ನಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತಮಾಡಿ, ಅಸ್ಸಾಂ ರಾಜ್ಯ ಸರ್ಕಾರ ಬಾಲ್ಯ ವಿವಾಹ ತಡೆಗೆ ಕೈಗೊಂಡಿರುವ ಕಠಿಣ ಕ್ರಮದಿಂದ ನಲುಗಿಹೋಗಿರುವ ಹೆಣ್ಣುಮಕ್ಕಳನ್ನ ಯಾರು ನೋಡಿಕೊಳ್ಳುತ್ತಾರೆ. ಕಳೆದ 6 ವರ್ಷಗಳಿಂದಲೂ ಮೌನ ವಹಿಸಿದ್ದದ್ದು ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿದ್ದಾರೆ.
ಬಾಲ್ಯ ವಿವಾಹ (Child Marriage) ತಡೆಗೆ ಅಸ್ಸಾಂ ಸರ್ಕಾರ ಕೈಗೊಂಡಿರುವ ಕಠಿಣ ಕಾರ್ಯಾಚರಣೆ ವಿರುದ್ಧ ಅವರು ಕಿಡಿಕಾರಿದ್ದಾರೆ. ಕಳೆದ 6 ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಅಷ್ಟು ವರ್ಷಗಳಿಂದ ನೀವು ಏನು ಮಾಡುತ್ತಿದ್ರಿ? ಅದು ನಿಮ್ಮ ಸರ್ಕಾರದ ವೈಫಲ್ಯ. ನೀವು ಪುರುಷರನ್ನ ಜೈಲಿಗೆ ಕಳುಹಿಸುತ್ತಿದ್ದೀರಿ. ಈಗ ಅವರ ಪತ್ನಿಯರು, ಹೆಣ್ಣುಮಕ್ಕಳನ್ನ ಸಿಎಂ ನೋಡಿಕೊಳ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಬಾಲ್ಯ ವಿವಾಹ ತಡೆಗೆ ಕಠಿಣ ಕಾರ್ಯಾಚರಣೆ ಕೈಗೊಂಡಿರುವ ಅಸ್ಸಾಂ ಪೊಲೀಸರು ಈಗಾಗಲೇ 2,250 ಮಂದಿಯನ್ನ ಬಂಧಿಸಿದ್ದಾರೆ. ಸಚಿವ ಸಂಪುಟದಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ ನಂತರ ರಾಜ್ಯಾದ್ಯಂತ ಬಾಲ್ಯ ವಿವಾಹದ ವಿರುದ್ಧ 4,074 ಕೇಸ್‌ಗಳು ದಾಖಲಾಗಿವೆ. 8 ಸಾವಿರ ಆರೋಪಿ ಪಟ್ಟಿಗಳನ್ನು ಹೊಂದಿರುವ ಪೊಲೀಸರು ಒಬ್ಬೊಬ್ಬರನ್ನೂ ಬಂಧಿಸುತ್ತಿದ್ದಾರೆ. ಈಗಾಗಲೇ 2,250 ಮಂದಿಯನ್ನ ಜೈಲಿಗಟ್ಟಿದ್ದಾರೆ.
14 ವರ್ಷದೊಳಗಿನ ಹುಡುಗಿಯರನ್ನ ಮದುವೆಯಾದವರ ವಿರುದ್ಧ ಪೋಕ್ಸೋ (POCSO) ಕೇಸ್ ಹಾಗೂ 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗಿದ್ರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಇದೀಗ ಅಸ್ಸಾಂ ಸಿಎಂ ಈ ಕ್ರಮ 2026ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಪ್ರತಿಪಾದಿಸಿದ್ದಾರೆ.