
ನಕಲಿ ಚಿನ್ನ ಕೊಟ್ಟು ಅಸಲಿ ಆಭರಣದೊಂದಿಗೆ ಅಜ್ಜಿ ಗ್ಯಾಂಗ್ ಎಸ್ಕೇಪ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಕಲಿ ಆಭರಣ ಕೊಟ್ಟು ಅಸಲಿ ಆಭರಣ ದೋಚಿ ಎಸ್ಕೇಪ್ ಆದ ಅಜ್ಜಿ (Old Woman) ಟೀಂಗಾಗಿ ಅಮೃತಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಗಳ ಮದುವೆಗೆ ಆಭರಣ ತೆಗೆದುಕೊಳ್ಳಲು ಬಂದ ಅಜ್ಜಿ ಹಾಗೂ ಆಕೆಯ ಜೊತೆಗಿದ್ದ ವ್ಯಕ್ತಿ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಅಮೃತಹಳ್ಳಿಯ ಧನಲಕ್ಷ್ಮಿ ಜ್ಯೂವಲರ್ಸ್‌ನಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಶಾಪಿಂಗ್ ಮಾಡಿದ್ದ ಗುಂಪೊಂದು ಮಗಳ ಮದುವೆ ಇದೆ, ನನ್ನ ತಾಯಿ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡಬೇಕು ಎಂದಿದ್ದರು. ಅಷ್ಟೇ ಅಲ್ಲದೇ ಅಜ್ಜಿಯ ಜೊತೆಗಿದ್ದ ವ್ಯಕ್ತಿ ರಾಹುಲ್ ಎಂದು ಪರಿಚಯಿಸಿಕೊಂಡು ನಾಗವಾರದ ನಿವಾಸಿ ಎಂದು ಹೇಳಿಕೊಂಡಿದ್ದ.
ನಂತರ ಅಜ್ಜಿ ಬ್ಯಾಗಿಂದ 240 ಗ್ರಾಂ ತೂಕದ ಗುಂಡಿನ ಸರ ತೆಗೆದಿದ್ದಾಳೆ. ಅದರಲ್ಲಿ ಒಂದು ಗುಂಡು ಚೆಕ್ ಮಾಡಿದಾಗ ಅಸಲಿ ಚಿನ್ನ (Gold) ಅನ್ನೋದು ತಿಳಿದು ಬಂದಿದೆ. ನಾಳೆ ಬಂದು ಚಿನ್ನ ಖರೀದಿ ಮಾಡುತ್ತೇವೆ ಎಂದು ಅಲ್ಲಿಂದ ಹೊರಟಿದ್ದರು. ಮರುದಿನ ನಕಲಿ ಗುಂಡಿನ ಸರ ತಗೊಂಡು ಬಂದು ಮಾಲೀಕನಿಗೆ ನೀಡಿದ್ದಾರೆ. ನಿನ್ನೆ (ಶನಿವಾರ) ಚರಕ್ ಮಾಡಿದ ಸರವೇ ಎಂದುಕೊಂಡು ಸರದ ತೂಕವನ್ನು ಚಿನ್ನದಂಗಡಿ ಮಾಲೀಕ ಹಾಕಿಕೊಂಡಿದ್ದಾನೆ.
ಈ ಅವಕಾಶವನ್ನೇ ಕಾಯುತ್ತಿದ್ದ ಗುಂಪು 10 ಲಕ್ಷ ಮೌಲ್ಯದ ಚಿನ್ನಾಭರಣ ಶಾಪಿಂಗ್ ಮಾಡಿದ್ದಾರೆ. ಉಂಗುರ, ಓಲೆ, ಬ್ರೆಸ್‌ಲೆಟ್, ಸರ ಸೇರಿದಂತೆ 168 ಗ್ರಾಂ ತೂಕದ ಅಸಲಿ ಆಭರಣ ಖರೀದಿ ಮಾಡಿದ್ದಾರೆ. ಮಗಳು ಗಂಡನ ಮನೆಗೆ ಹೋಗುತ್ತಾಳೆ ಅಂತ ಬೆಳ್ಳಿ ದೀಪ, ಕುಂಕುಮ ಬಟ್ಟಲು, ಕಾಲ್ಗಜ್ಜೆ ಎಂದು ಸಾಲು ಸಾಲು ಬೆಳ್ಳಿ ಸಾಮಾನು ಶಾಪಿಂಗ್ ಮಾಡಿ, ನಗು ಮಗುತ್ತಾ ಮಾತಾಡಿ ಅಲ್ಲಿಂದ ಅಜ್ಜಿ ಹಾಗೂ ಆಕೆಯ ಗುಂಪು ಹೊರಟಿದೆ.
ಇದಾದ ಬಳಿಕ ಮಾಲೀಕ ಚಿಕ್ಕಪೇಟೆಗೆ ಹಳೆ ಸರ ಮಾರಾಟಕ್ಕೆ ಬಂದಾಗ ನಕಲಿ ಎನ್ನುವುದು ಗೊತ್ತಾಗಿದೆ. ತಕ್ಷಣವೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ಜ್ಯುವೆಲರ್ಸ್ ಮಾಲೀಕ ಓಂ ಪ್ರಕಾಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಅಮೃತಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.