
ಡೋಪಿಂಗ್ ಟೆಸ್ಟ್‌ನಲ್ಲಿ ಫೇಲ್ – ಜಿಮ್ನಾಸ್ಟ್ ದೀಪಾ ಕರ್ಮಾಕರ್ 21 ತಿಂಗಳು ಅಮಾನತು
ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಪದಕ ವಿಜೇತ ಜಿಮ್ನಾಸ್ಟಿಕ್ (Gymnast) ಪಟು ದೀಪಾ ಕರ್ಮಾಕರ್ (Dipa Karmakar) ನಿಷೇಧಿತ ವಸ್ತು ಬಳಸಿರುವುದು ಸಾಬೀತಾಗಿದೆ. ಈ ಬೆನ್ನಲ್ಲೇ 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಲಾಗಿದೆ.
2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಡೋಪಿಂಗ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಇದೀಗ ನಿಷೇಧಿತ ಪದಾರ್ಥ ಸೇವಿಸಿರುವುದು ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಕೂಡ ಪ್ರಕಟಗೊಂಡಿದೆ. ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್ (S3 Beta-2 Agonists) ಸೇವಿಸಿರುವುದು ಡೋಪಿಂಗ್ ಟೆಸ್ಟ್‌ನಲ್ಲಿ (Test) ಸಾಬೀತಾಗಿದ್ದು, ವರದಿ ಪಾಸಿಟಿವ್ ಬಂದಿದೆ. ವರದಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (FIG) ದೀಪಾ ಕರ್ಮಾಕರ್‌ಗೆ 21 ತಿಂಗಳ ಶಿಕ್ಷೆ ವಿಧಿಸಿ, 2021ರ ಅಕ್ಟೋಬರ್ 11ರಂದು ದೀಪಾ ಕರ್ಮಾಕರ್ ಪಾಲ್ಗೊಂಡ ಸ್ಪರ್ಧೆಯ ಫಲಿತಾಂಶಗಳನ್ನು ಅನರ್ಹಗೊಳಿಸಿದೆ.
2014ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಜಿಮ್ಯಾಸ್ಟಿಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ದೀಪಾ ಕರ್ಮಾಕರ್, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ (Rio Olympics) ನಾಲ್ಕನೇ ಸ್ಥಾನ ಪಡೆದು ಭಾರತದ ಪರ ಇತಿಹಾಸ ಬರೆದಿದ್ದರು. ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಉತ್ತಮ ಶ್ರೇಣಿ ಪಡೆದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ 0.15 ಅಂಕಗಳ ಅಂತರದಿಂದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು.
2018ರಲ್ಲಿ ನಡೆದ ಮೆರಿಸಿನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ದೀಪಾ ಕರ್ಮಾಕರ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು. ಈ ಮೂಲಕ ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದ ಮೊದಲ ಭಾರತದ ಕ್ರೀಡಾಪಟು ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು.
ಇದೀಗ ದೀಪಾ 21 ತಿಂಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದು, 2021ರ ಅಕ್ಟೋಬರ್‌ನಿಂದ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದೀಪಾ ಕರ್ಮಾಕರ್‌ಗೆ ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಅವಧಿ ಪೂರೈಸಿದ್ದಾರೆ. 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಈ ಬಗ್ಗೆ ಸ್ವತಃ ದೀಪಾ ಕರ್ಮಾಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನನ್ನ ಕ್ರೀಡಾ ಬದುಕಿನಲ್ಲಿ ನಡೆದ ದೊಡ್ಡ ಹೋರಾಟ ಇದೀಗ ಅಂತ್ಯ ಕಂಡಿದೆ. ಫಲಿತಾಂಶ ಪಾಸಿಟಿವ್ ಬಂದಿದೆ. ಫಲಿತಾಂಶದ ಬಗ್ಗೆ ಯಾವುದೇ ಅನುಮಾನವಿಲ್ಲ. ನನಗೆ ಅರಿವಿಲ್ಲದೆ ನಿಷೇಧಿತ ಪದಾರ್ಥ ಸೇವಿಸಿರಬಹುದು. ಆದರೆ ಭಾರತದ ಕ್ರೀಡಾ ಪ್ರಾಧಿಕಾರದ ಹೆಜ್ಜೆ ಸಂತಸ ತಂದಿದೆ. ಮುಂದಿನ ಜುಲೈನಲ್ಲಿ ಮತ್ತೆ ಜಿಮ್ಯಾಸ್ಟಿಕ್ ಅಂಕಣಕ್ಕೆ ಕಾಲಿಡಲು ಹಾತೊರೆಯುತ್ತಿದ್ದೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.