
ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ (T20 World Cup) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಫೈನಲ್ ಪಂದ್ಯದ ಹೀರೋ ಜೋಗಿಂದರ್ ಶರ್ಮಾ (Joginder Sharma) ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ (Retirement) ಘೋಷಿಸಿದ್ದಾರೆ.
2002 ರಿಂದ 2017ರ ವರೆಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಜೋಗಿದಂರ್ ಶರ್ಮಾ 2007 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀರೋ ಆಗಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 13 ರನ್ ಬೇಕಾಗಿತ್ತು. ಈ ಮೊತ್ತವನ್ನು ಬಿಟ್ಟುಕೊಡದೆ ತಮ್ಮ ಅದ್ಭುತ ದಾಳಿಯ ಮೂಲಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಜೋಗಿಂದರ್ ಶರ್ಮಾ ಆಗೊಮ್ಮೆ ಹೀಗೊಮ್ಮೆ ತಂಡದಲ್ಲಿ ಸ್ಥಾನ ಪಡೆದು ಬಳಿಕ ತಂಡದಿಂದ ದೂರ ಉಳಿದಿದ್ದರು. ಇದೀಗ ಎಲ್ಲಾ ಮಾದರಿ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದಾರೆ.
ಈ ಬಗ್ಗೆ ಬಿಸಿಸಿಐಗೆ (BCCI) ಪತ್ರ ಬರೆದಿದ್ದ ಜೋಗಿಂದರ್ ಶರ್ಮಾ, 2007 ರಿಂದ 2017ರ ವರೆಗಿನ ನನ್ನ ಕ್ರಿಕೆಟ್ ಜರ್ನಿಗೆ ಇದೀಗ ವಿದಾಯ ಘೋಷಿಸುತ್ತಿದ್ದು, ಬಿಸಿಸಿಐ, ಹರಿಯಾಣ ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಧನ್ಯವಾದ ತಿಳಿಸುತ್ತೇನೆ. ತಂಡದ ಸಹ ಆಟಗಾರರು, ಕೋಚ್, ಮೆಂಟರ್, ಸಹಾಯಕ ಸಿಬ್ಬಂದಿ ಜೊತೆ ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಎಂದು ವಿದಾಯ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಜೋಗಿಂದರ್ ಶರ್ಮಾ ಭಾರತ ಪರ ತಲಾ 4 ಏಕದಿನ ಮತ್ತು ಟಿ20 ಪಂದ್ಯಗಳಿಂದ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‍ನಲ್ಲಿ (IPL) ಒಟ್ಟು 16 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ.
ಜೋಗಿಂದರ್ ಶರ್ಮಾ ಕ್ರಿಕೆಟ್ ಬಳಿಕ ವೃತ್ತಿಯಲ್ಲಿ ಪೊಲೀಸ್ ಆಗಿದ್ದು ಪ್ರಸ್ತುತ ಹರಿಯಾಣದ ಡಿಎಸ್‍ಪಿ (DSP) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.