
‘ಏರೋ ಶೋ 2023’ ನಿಮಿತ್ತ ಬೆಂಗಳೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ. ಇದು ಇಡೀ ಚಂದನವನಕ್ಕೆ ಹೆಮ್ಮೆ ತಂದಿದೆ. ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಿಂದ ಇಷ್ಟೆಲ್ಲ ಸಾಧ್ಯವಾಗಿದೆ. ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ನಟ ಯಶ್ ಅವರು ಕನ್ನಡ ಚಿತ್ರರಂಗದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಅವರು ಕೂಡ ಭಾನುವಾರ (ಫೆಬ್ರವರಿ 12) ಸಂಜೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಏನೆಲ್ಲ ಚರ್ಚೆ ಆಯಿತು ಎಂಬುದನ್ನು ‘ರಾಕಿಂಗ್ ಸ್ಟಾರ್’ ಯಶ್ ತಿಳಿಸಿದ್ದಾರೆ.
‘ಮೋದಿ ಅವರು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಕೇಳಿದರು. ನಮ್ಮ ಚಿತ್ರರಂಗದ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಕೂಡ ತಿಳಿಸಿದರು. ಸರ್ಕಾರದಿಂದ ಚಿತ್ರರಂಗದವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಅಂತ ವಿಚಾರಿಸಿದರು. ಚಿತ್ರರಂಗವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿದರು’ ಎಂದು ಯಶ್ ಹೇಳಿದ್ದಾರೆ.
‘ಪ್ರಧಾನ ಮಂತ್ರಿಗಳ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುವ ಅವಕಾಶ ನಮಗೆ ಸಿಕ್ಕಿತು. ನಿಮಗೆ ಏನೇ ಬೇಕಿದ್ದರೂ ಬಂದು ಅವುಗಳನ್ನು ಪಡೆದುಕೊಳ್ಳಿ ಅಂತ ಹೇಳಿದರು. ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನು ಕೂಡ ಅವರು ತಿಳಿದುಕೊಂಡಿರುವುದು ನನಗೆ ಅಚ್ಚರಿ ಎನಿಸಿತು. ಚಿತ್ರೋದ್ಯಮದ ಬಗ್ಗೆ ಅವರಿಗೆ ದೂರದೃಷ್ಟಿ ಇದೆ. ನಮ್ಮ ಕೆಲಸವನ್ನು ಅವರು ಹೊಗಳಿದರು. ಎಂದೆಂದಿಗೂ ಅವರು ನಮಗೆಲ್ಲ ಸ್ಫೂರ್ತಿ’ ಎಂದು ಯಶ್ ಹೇಳಿದ್ದಾರೆ.
‘ಕನಸು ನನಸಾದ ಕ್ಷಣ ಇದು. ಪ್ರಧಾನ ಮಂತ್ರಿ ಅವರನ್ನು ನಾನು ಮಹಾನ್ ನಾಯಕರೆಂದು ತಿಳಿದಿದ್ದೇನೆ. ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬ ಖುಷಿ ಆಯಿತು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲ ಬೇಕು ಎಂಬ ಬಗ್ಗೆ ಅವರು ಕೇಳಿದರು. ಮುಂದಿನ ದಿನಗಳಲ್ಲಿ ಅವರು ಏನೆಲ್ಲ ಮಾಡಬಹುದು ಎಂಬುದನ್ನೂ ಹೇಳಿದರು’ ಎಂದಿದ್ದಾರೆ ರಿಷಬ್ ಶೆಟ್ಟಿ.
‘ನಮ್ಮ ಕಾಂತಾರ ಚಿತ್ರದ ಬಗ್ಗೆ ತುಂಬ ಮಾತನಾಡಿದರು. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ತಿಳಿದಿದ್ದಾರೆ. ನಮ್ಮ ನಾಡಿನ ಕಥೆ, ನಮ್ಮ ಜನಪದ, ನಮ್ಮ ನಂಬಿಕೆ, ಸಂಪ್ರದಾಯವನ್ನು ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಜಾಗತಿಕ ಮಟ್ಟಕ್ಕೆ ಹೋಗಿದ್ದಕ್ಕೆ ಅಭಿನಂದನೆ ತಿಳಿಸಿದರು. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಸಿನಿಮಾ ಬಗ್ಗೆ ಕೇಳಿ ಖುಷಿ ಆಯಿತು’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.