
ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು
ಟಿಪ್ಪು ರೀತಿ ಸಿದ್ದರಾಮಯ್ಯ ರನ್ನು ಹೊಡೆದು ಹಾಕಬೇಕು ಹೇಳಿಕೆ ನೀಡಿ ವಿವಾದಕ್ಕೀಡಾದ ಬೆನ್ನಲ್ಲೇ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೂರು ದಾಖಲು ಮಾಡಲಾಗಿದೆ.
ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಅಶ್ವಥ್ ನಾರಾಯಣ್ ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ಟಿಪ್ಪು ವಂಶಸ್ಥರನ್ನ ಕೊಲೆ ಮಾಡಬೇಕು ಅಂತ ಕಟೀಲ್ ಹೇಳಿಕೆ ನೀಡಿದರೆ, ಸಿದ್ದರಾಮಯ್ಯರನ್ನ ಟಿಪ್ಪು ಹೊಡೆದು ಹಾಕಿದ ಹಾಗೆ ಹೊಡೀಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹುಬ್ಬಳ್ಳಿಯ ಗೋಕುಲ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ ಸಚಿವರ ವಿರುದ್ಧ ಕ್ರಮಕ್ಕೆ ಬಳಗ ಒತ್ತಾಯಿಸಿದೆ.
ಅಶ್ವಥ್ ನಾರಾಯಣ್ ಹೇಳಿಕೆ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯರಾಜಕೀಯದಲ್ಲಿ ನಾಯಕರ ವಾಗ್ದಾಳಿಗಳು ನಡೆಯುತ್ತವೆ. ಅಂತೆಯೇ ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ್ದ ಸಚಿವ ಅಶ್ವಥ್ ನಾರಾಯಣ್, ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ.
ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದರು.
ಸಚಿವರು ವಿಷಾದ: ಸಚಿವರ ಹೇಳಿಕೆ ಭಾರೀ ವಿವಾದ ಹುಟ್ಟಿಸಿತ್ತು. ಈ ಬೆನ್ನಲ್ಲೇ ಅಶ್ವಥ್ ನಾರಾಯಣ್ ಅವರು ವಿಷಾದ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಟಿಪ್ಪು-ಸಿದ್ದರಾಮಯ್ಯ ಹೋಲಿಸಿ ತಾನು ಮಾತಾಡಿದ್ದು, ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ತಿಳಿಸಿದರು.