
ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮುತುವರ್ಜಿ ಗಮನಾರ್ಹ. ಆದರೆ ಬಜೆಟ್ ಮಂಡನೆಗೆ ಮೊದಲು ಖಾಸಗಿ ವಲಯದವರ ಜತೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಮ್ಮೆ ಚರ್ಚಿಸಬಹುದಿತ್ತು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಹೇಳಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದು ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಗಳ ಸದುಪಯೋಗಪಡಿಸುವ ಉದ್ದೇಶ ರಾಜ್ಯದ 2023-24ರ ಆಯವ್ಯಯದಲ್ಲಿ ವ್ಯಕ್ತವಾಗಿದೆ. ಆದರೆ ಖಾಸಗಿ ಉದ್ಯಮಿಗಳನ್ನು ಪೂರ್ವ ಬಾವಿ ಸಭೆಗೆ ಕರೆಯದೆ ಇರುವುದನ್ನೂ ಈ ಸಲದ ಆಯ-ವ್ಯಯ ಬಿಂಬಿಸಿದೆ. ಹೀಗಾಗಿಯೇ ಬಜೆಟ್‌ನಲ್ಲಿ ಅಭಿವೃದ್ಧಿ ಹೊಂದಿರುವ ಪ್ರವಾಸಿ ತಾಣಗಳನ್ನು ಪುನಃ ಗುರುತಿಸುವ ಕೆಲಸ ನಡೆದಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಟೀಕಿಸಿದೆ.
ರಾಜ್ಯದ ಖಾಸಗಿ ವಾಹನ ಮಾಲಿಕರು ಎರಡುವರ್ಷಗಳಿಂದ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಸೋದ್ಯಮವನ್ನು ಬಲಪಡಿಸುವ ಉದ್ದೇಶದಿಂದ ರಸ್ತೆ ತೆರಿಗೆಯ ವಿನಾಯಿತಿ ಖಾಸಗಿ ವಾಹನ ಮಾಲೀಕರಿಗೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಜ್ಯ ಸರ್ಕಾರ ಖಾಸಗಿ ವಾಣಿಜ್ಯ ವಾಹನಗಳ ಮಾಲೀಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ರಾಜ್ಯದ 30 ಲಕ್ಷ ಮಹಿಳಾ ಕಾರ್ಮಿಕರಿಗೆ ನೀಡಿದ ಉಚಿತ ಬಸ್ಸಿನ ಸೇವೆಯನ್ನು ಸರ್ಕಾರಿ ಬಸ್ಸಿನ ಮೂಲಕ ಪಡೆಯುವಂತೆ ನೋಡಿಕೊಂಡಿದೆ. ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 1,505 ಕೋಟಿ ರೂಪಾಯಿ ತೆರಿಗೆ ವಿನಾಯಿತಿಯ ಘೋಷಿಸಿದೆ. ಇದರಿಂದ ಆಂತರಿಕ ಪೈಪೋಟಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಕಳವಳ ವ್ಯಕ್ತಪಡಿಸಿದೆ.
ಕಳೆದ ವರ್ಷ ಅಂದರೆ 2022ರಲ್ಲಿ 8,000 ಕೋಟಿ ರೂಪಾಯಿಗಿಂತ ಹೆಚ್ಚು (25% ಅಧಿಕ ವಾಹನ ಮಾರಾಟ) ತೆರಿಗೆ ಸಂದಾಯ ಸಾರಿಗೆವಲಯದಿಂದ ರಾಜ್ಯದ ಬೊಕ್ಕಸಕ್ಕೆ ಬಂದಿದೆ. ಹೊರರಾಜ್ಯಗಳಿಗೆ ಹೊಂದಾಣಿಕೆ ಆಗುವ ತೆರಿಗೆ ಯೋಜನೆಯಲ್ಲಿ ನಮ್ಮ ರಾಜ್ಯದ ಪ್ರವಾಸಿ ವಾಹನಗಳ ತೆರಿಗೆ ಸುಧಾರಣೆ ಮಾಡಬೇಕಿತ್ತು. ಇದರಿಂದ ರಾಜ್ಯದ ವಾಹನ ಮಾಲಿಕರು ಹೊರ ರಾಜ್ಯಕ್ಕೆ ವಲಸೆ ಹೋಗುವ ಸನ್ನಿವೇಶ ಬರುವುದಿಲ್ಲ. ರಾಜ್ಯದ ಅವಲಂಬಿತರಿಗೆ ಸರ್ಕಾರ ಯಾವುದೇ ಪೂರಕ ಸೌಲಭ್ಯ ಘೋಷಣೆ ಮಾಡಿಲ್ಲ. ಇದು ಖೇದಕರ.
ಚಾಲಕರಿಗೆ ಭದ್ರತೆಯ ಯೋಜನೆ 4 ಲಕ್ಷ ಹಾಗೂ ಮಾರ್ಗದರ್ಶಿಗಳಿಗೆ 5000 ರೂ ಪ್ರೋತ್ಸಾಹ ದನ ಬಿಡುಗಡೆ, ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ರಸ್ತೆ ಬದಿಯ ಪ್ರಯಾಣಿಕ ಸೌಕರ್ಯಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
ಅಂತಾರಾಷ್ಟ್ರೀಯ ಮಟ್ಟದ ಉದ್ಯಮದ ಏಳಿಗೆಗೆ ದೇಶಿಯ ಉದ್ಯಮಿಗಳು ಪೈಪೋಟಿಕೊಡಲು ರಸ್ತೆ ತೆರಿಗೆಯ ವಿನಾಯಿತಿಯಲ್ಲಿ ಖಾಸಗಿ ವಾಹನ ಮಾಲಿಕರಿಗೂ ಶೇಕಡ 30 ತೆರಿಗೆ ಕಡಿತಗೊಳಿಸಬೇಕಿತ್ತು. ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಖಾಸಗಿ ಟ್ರಾವೆಲ್ಸ್ ವಲಯವನ್ನು ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.