
ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಕೆಸರೆರಚಾಟ ಹೆಚ್ಚಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅಂಥದ್ದೇ ಚರ್ಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತುತ್ತಾಗಿದ್ದಾರೆ.
ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ನಾನ್ ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ. ಎಲ್ಲವನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್‍ನವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಟ್ವೀಟ್ ಮಾಡಿ ಕಾಲೆಳೆದ ಕಾಂಗ್ರೆಸ್, ಬಿಜೆಪಿಗರದ್ದು ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ವೇಷ. ಹೊಟ್ಟೆಗೆ ಏನ್ ತಿಂದಿದ್ದೆ ಅನ್ನೋದನ್ನೇ ಮರೆತಿದ್ದ ಸಿಟಿ ರವಿ ಅವರಿಗೆ ಅಂದು ಆಕ್ಸಿಡೆಂಟ್ ಮಾಡಿದಾಗ ಕುಡಿದಿದ್ದೇನು ಅನ್ನೋದಾದ್ರೂ ನೆನಪಿದೆಯೇ?. ದೇವಸ್ಥಾನದ ಆವರಣ ಪ್ರವೇಶಿಸಿದ್ದಕ್ಕೆ ಸಾಕ್ಷಿ ಇದ್ದರೂ ಸುಳ್ಳು ಹೇಳುವ ಸಿ.ಟಿ ರವಿ- “ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್”!! ಎಂದು ಹೇಳಿದೆ.
ಫೆ.19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.