
ರೇಣುಕಾಸ್ವಾಮಿ ಕೊಲೆಯಾದ ಶೆಡ್ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರನ್ನಿರಿಸಿದ್ದ ಪಟ್ಟಣಗೆರೆಯ ಶೆಡ್ನಲ್ಲಿ ಪೊಲೀಸರು ಇಂದು (ಬುಧವಾರ) ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಇತರ ಆರೋಪಿಗಳನ್ನ ಕರೆತಂದು ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು.
ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL Team) ಸುಮಾರು ಒಂದೂವರೆಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ, ಮೃತಪಟ್ಟ ನಂತರ ರೇಣುಕಾಸ್ವಾಮಿ ತಲೆ ಮತ್ತು ಕೈಕಾಲುಗಳು ಯಾವ ದಿಕ್ಕಿಗೆ ತಿರುಗಿತ್ತು? ಎಲ್ಲಾ ವಿಷಗಳನ್ನು ಆರೋಪಿಗಳಿಂದ ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದಾರೆ.
ಆರೋಪಿಗಳ ಸಮ್ಮುಖದಲ್ಲಿ ಘಟನೆಯನ್ನ ಮರುಸೃಷ್ಟಿ ಮಾಡಿದ್ದ ಪೊಲೀಸರು, ಬಳಿಕ ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಹಲ್ಲೆಗೆ ಬಳಸಿದ್ದ ವಸ್ತುಗಳು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡುಗಳ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ಸ್ಥಳ ಮಹಜರು ಮುಗಿದ ಬಳಿಕ ಪೊಲೀಸರು ಮತ್ತೆ ಠಾಣೆಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ.
50 ಮೀಟರ್ ವರೆಗೆ ಪ್ರವೇಶ ನಿಷೇಧ:
ಸ್ಥಳ ಮಹಜರು ವೇಳೆ ಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಮುಂಭಾಗ 50 ಮೀಟರ್ ವರೆಗೂ ಸಾರ್ವಜನಿಕರ ಪ್ರವೇಶ ನಿಷೇಧಗೊಳಿಸಲಾಗಿತ್ತು.