
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಅಪಘಾತಕ್ಕೆ ಕಡಿವಾಣ ಹಾಕಲು ಹೊಸ ಪ್ರಯತ್ನ ಮಾಡಿದ್ದಾರೆ.
ಬಸ್ ಚಾಲಕರಿಗೆ ವಿಶೇಷ ತರಬೇತಿ ನೀಡುವ ಮುಖೇನ ಬಿಎಂಟಿಸಿ ಬಸ್ಗಳಿಂದ ಸಂಭವಿಸುತ್ತಿದ್ದ ಅಪಘಾತ ಸಂಖ್ಯೆ ಕಡಿಮೆ ಮಾಡಲು ಇದೀಗ ಮುಂದಾಗಿದ್ದಾರೆ.
ಕಳೆದ ಮೂರು ವರ್ಷಕ್ಕೆ ಹೋಲಿಕೆ ಮಾಡಿದರೆ, 2024ರಲ್ಲಿ ಇಲ್ಲಿಯವರೆಗೆ ಕೇವಲ ನಾಲ್ಕು ಅಪಘಾತಗಳು ಸಂಭವಿಸಿವೆ. ಈ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರ ಶ್ರಮಕ್ಕೆ ಫಲ ಸಿಕ್ಕಿದೆ. ಕಳೆದ ಮೂರು ವರ್ಷದಲ್ಲಿ 90ಕ್ಕೂ ಹೆಚ್ಚು ಅಪಘಾತ ಪ್ರಕರಣ ದಾಖಲಾಗಿವೆ.
ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ಬಿಎಂಟಿಸಿ ಬಸ್ ಚಾಲಕರಿಗೆ ಕಳೆದ 6 ತಿಂಗಳಿನಿಂದ ತರಬೇತಿ ನೀಡಲು ಆರಂಭಿಸಿದ್ದಾರೆ. ಪ್ರತಿದಿನ 50 ಜನರಂತೆ 12 ಸಾವಿರ ಬಿಎಂಟಿಸಿ ಬಸ್ ಚಾಲಕರಿಗೂ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸುಮಾರು 8 ಸಾವಿರ ಚಾಲಕರಿಗೆ ತರಬೇತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರತಿದಿನ 12 ಗಂಟೆ ಕೆಲಸ ಮಾಡುತ್ತಾರೆ. ಟ್ರಾಫಿಕ್ ನಡುವೆ 12 ಗಂಟೆ ಕೆಲಸ ಮಾಡಿ ಚಾಲಕರು ದೈಹಿಕ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಇದರಿಂದ ತಿರುವುಗಳಲ್ಲಿ ಮತ್ತು ಜನ ದಟ್ಟಣೆ ಇರುವ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿದ್ದವು ಎನ್ನಲಾಗಿದೆ.