
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸೋಮವಾರ 20 ಐಷಾರಾಮಿ ಐರಾವತ್ ಕ್ಲಬ್ ಕ್ಲಾಸ್ 2.0 ಮಾದರಿಯ ಬಸ್ಗಳು ಸೇರ್ಪಡೆಗೊಳ್ಳಲಿವೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಐರಾವತ್ ಕ್ಲಬ್ ಕ್ಲಾಸ್ 2.0 ಒಂದು ಬಸ್ಸಿನ ದರ ರೂ.1.78 ಕೋಟಿ ರೂ. ಆಗಿದ್ದು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.
ಬೆಂಗಳೂರು, ಅಕ್ಟೋಬರ್ 07: ಕೆಎಸ್ಆರ್ಟಿಸಿ (KSRTC) ನಿಗಮಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ ಹೊಸ 20 ಬಸ್ಗಳು ಸೇರ್ಪಡೆಗೊಳ್ಳಲಿವೆ. ಆ ಮೂಲಕ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ತಿಂಗಳ ಕೊನೆಯ ವಾರದಲ್ಲಿ ಸೇರ್ಪಡೆಗೊಳ್ಳಲಿರುವ ಒಂದು ಬಸ್ಸಿನ ದರ ರೂ. 1.78 ಕೋಟಿ ರೂ. ಆಗಿದೆ.
ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಕೆಎಸ್ಆರ್ಟಿಸಿ ಎಂಡಿ ಅನ್ಬುಕುಮಾರ್ ಹೊಸಕೋಟೆ ಬಳಿ ಇರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ನೂತನ ಬಸ್ಗಳನ್ನು ಪರೀಕ್ಷಿಸಿದ್ದಾರೆ.
ಕೆಎಸ್ಆರ್ಟಿಸಿ ನಿಗಮಕ್ಕೆ ಸೇರ್ಪಡೆಗೊಳ್ಳುತ್ತಿರುವ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ ಹೊಸ ಬಸ್ಗಳು ಶಕ್ತಿಶಾಲಿ ಹ್ಯಾಲೊಜೆನ್ ಹೆಡ್ಲೈಟ್ಗಳು ಮತ್ತು ಡೇ ರನ್ನಿಂಗ್ ಲೈಟ್ಗಳೊಂದಿಗೆ, ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿದೆ. ಏರೋ ಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ.
ಈ ಬಸ್ಗಳು 3.5% ಉದ್ದ ಮತ್ತು 5.6% ಎತ್ತರ ಇರುವುದರಿಂದ ಸೀಟ್ಗಳ ನಡುವಿನ ಅಂತರ ಮತ್ತು ಹೆಚ್ಚಿನ ಹೆಡ್ ರೂಂ ಹೊಂದಿದೆ. ಜೊತೆಗೆ ಯುಎಸ್ಬಿ+ಸಿ ಟೈಪ್ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಉತ್ತಮ ಎಸಿ, ಫೈರ್ ಅಲಾರ್ಮ್, ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ.
9.5% ರಷ್ಟು ವಿಂಡ್ಶೀಲ್ಡ್ ಗಾಜು ವಿಸ್ತಾರವಾಗಿದೆ. ಈ ಬಸ್ನಲ್ಲಿ ಸಾಕಷ್ಟು ಲಗೇಜ್ ಸ್ಥಳಾವಕಾಶವಿದೆ. ಅಂದರೆ ಹಿಂದಿನ ಬಸ್ಗಳಿಗೆ ಹೋಲಿಸಿದರೆ ಶೇಕಾಡಾ 20% ರಷ್ಟು ವಿಸ್ತಾರವಾಗಿದೆ. ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡಲಾಗಿದೆ. ಬಸ್ ಒಳಗೆ ಆಸನದ ಎರಡು ಬರಿಯಲ್ಲಿ ನೀರಿನ ಪೈಪುಗಳಿದ್ದು ಬೆಂಕಿ ಅವಘಡ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಸಿಂಪಡಿಸುತ್ತದೆ.