
‘ಬೆಳದಿಂಗಳ ಬಾಲೆ’ ಸಂಧ್ಯಾ ದುರಂತ ಅಂತ್ಯ; ದುಡ್ಡಿರೋರು ಯಾರನ್ನ ಬೇಕಾದ್ರೂ ಸಾಯಿಸಬಹುದಾ? ಆಗಿದ್ದೇನು?
ಸಾವು ಅನ್ನೋದು ಅದ್ಯಾವಾಗ ಹೇಗೆ ಬರುತ್ತೆ ಅಂತ ಹೇಳೋದಕ್ಕೆ ಸಾಧ್ಯ ಇಲ್ಲ. ವೇರಿ ಟ್ಯಾಲೆಂಟೆಡ್, ಪೈಂಟಿಂಗ್ ಸ್ಪೆಷಲಿಸ್ಟ್, ಅದ್ಭುತ ಕಂಠ ಹೊಂದಿದ್ದ ಸಂಧ್ಯಾ ಮತ್ಯಾರದ್ದೋ ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟಿದ್ದಾಳೆ.
ಈ ಮುದ್ದು ಮುಖದ ಯುವತಿ ಈಗ ಇಲ್ಲ. ಯಾರದ್ದೋ ಹುಚ್ಚಾಟಕ್ಕೆ.. ಇನ್ಯಾರದ್ದೋ ಮೋಜು ಮಸ್ತಿಗೆ ಇನ್ನು ಬಾಳಿ ಬದುಕಬೇಕಿದ್ದ 30 ವರ್ಷದ ಸಂಧ್ಯಾ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.
ಸಂಧ್ಯಾ ಅದ್ಭುತ ಹಾಡುಗಾರ್ತಿ ಅಷ್ಟೇ ಅಲ್ಲ, ಪೈಂಟಿಂಗ್ನಲ್ಲೂ ಮಾಸ್ಟರ್. ಬೆಳದಿಂಗಳ ಬಾಲೆ ಎಂದೇ ಸೋಷಿಯಲ್ ಮಿಡಿಯಾದಲ್ಲಿ ಖ್ಯಾತಿ ಪಡೆದಿರುವ ಈಕೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನಿಯಾಗಿ ಕೆಲಸ ಮಾಡಿದ್ದಾರೆ. ಬಿಗ್‌ಎಫ್ಎಂನಲ್ಲಿ ಱಪಿಡ್ ರಶ್ಮಿ ಜೊತೆಗೂ ಸಂಧ್ಯಾ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಹಲವು ಸಂಸ್ಥೆಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿರುವ ಈಕೆ, ಸ್ನೇಹಿತೆಯ ಜೊತೆ ದಿಶಾ ಬೊಟಿಕ್ ಶುರು ಮಾಡಿದ್ರು ಆದ್ರೆ, ವಿಧಿಯಾಟ ಬೇರೆಯೇ ಇತ್ತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಕೆ ಮೇಲೆ ಬೆಂಜ್ ಕಾರು ಯಮನಂತೆ ಎರಗಿ ಬಿಟ್ಟಿದೆ.
ಫ್ರೆಂಡ್ಸ್ ಜೊತೆ ಶನಿವಾರ ಭರ್ಜರಿ ಪಾರ್ಟಿ ಮುಗಿಸಿ ರೋಡಲ್ಲಿ ಱಶ್ ಡ್ರೈವಿಂಗ್ ಮಾಡುತ್ತಿದ್ದ ಆರೋಪಿ ಧನುಷ್ ಹುಚ್ಚಾಟಕ್ಕೆ, ಸಂಧ್ಯಾ ಬಲಿಯಾಗಿದ್ದಾರೆ. ಸಂಜೆ 6.45ಕ್ಕೆ ತನ್ನ ಪಾಡಿಗೆ ತಾನು ಕೆಲಸ ಮುಗಿಸಿ ಕೆಂಗೇರಿ ಬಸ್ ನಿಲ್ದಾಣದ ಬಳಿ ಸಂಧ್ಯಾ ಬಂದಿದ್ದು, ಅಲ್ಲಿ ರಸ್ತೆ ಕ್ರಾಸ್ ಮಾಡಿ ಮನೆ ಕಡೆ ಹೊರಟ್ಟಿದ್ದಾರೆ ಈ ವೇಳೆ ಸ್ಪೀಡಾಗಿ ಬರ್ತಿದ್ದ ಬೆನ್ಜ್ ಕಾರು ಟೆಕ್ಕಿ ಸಂಧ್ಯಾಗೆ ಗುದ್ದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಅಲ್ಲಿಯೇ ಪಕ್ಕದಲ್ಲಿದ್ದ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಂಧ್ಯಾ ಸಾವನ್ನಪ್ಪಿದ್ದಾರೆ. ಇನ್ನ ಸಂಧ್ಯಾಗೆ ಗುದ್ದಿದ ಬಳಿಕ ಆರೋಪಿ ಧನುಷ್, ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗುದ್ದಿದ್ದು, ಆತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಮ್ಮ ಅತಿರೇಖದ ಆಟಕ್ಕೆ ಅಮಾಯಕಿಯನ್ನ ಬಲಿ ಪಡೆದ ಬಳಿಕವೂ ಕೊಂಚವೂ ಮಾನವೀಯತೆ ಇಲ್ಲದವರಂತೆ ಅಪಘಾತವೆಸಗಿ ಕಾರ್ನಲ್ಲಿದ್ದ ಧನುಷ್ & ಸ್ನೇಹಿತರು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಪರಾರಿಯಾಗ್ತಿದ್ದ ಆರೋಪಿಗಳನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಆರೋಪಿಗಳು ಅಮಲಿನಲ್ಲಿಯೇ ಇರುವುದು ಕಂಡು ಬಂದಿದೆ. ಕೂಡಲೇ ಪೊಲೀಸರು ಅಪಘಾತಕ್ಕೆ ಕಾರಣವಾದ ಬೆಂಜ್ ಕಾರು ವಶಕ್ಕೆ ಪಡೆದಿದ್ದು, ಬಿಎನ್ಎಸ್ 105 ಅಡಿಯಲ್ಲಿ ಆರೋಪಿ ಧನುಷ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮುದ್ದಿನ ಮಡದಿಯನ್ನ ಕಳೆದುಕೊಂಡ ಪತಿ ಶಿವಕುಮಾರ್ ಸಂಕಟ ಹೇಳತೀರದಾಗಿದೆ. ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 4ಕ್ಕೆ ಮದುವೆಯಾಗಿ ಮೂರು ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಬೇಕಿತ್ತು. ಆದ್ರೆ ಅಷ್ಟರಲ್ಲೇ ಕ್ರೂರಿ ವಿಧಿ ಆಕೆಯನ್ನ ಬಲಿ ಪಡೆದಿದೆ.
ಕೋವಿಡ್ ಸಂದರ್ಭದಲ್ಲಿ ತಾಯಿ ಕಳೆದುಕೊಂಡಿದ್ದ ಸಂಧ್ಯಾ ಇದೀಗ ಯಾರದ್ದೋ ಹುಚ್ಚಾಟಕ್ಕೆ ತನ್ನ ಬಾಳಿನ ಪಯಣವನ್ನ ಅರ್ಧಕ್ಕೆ ನಿಲ್ಲಿಸಿ ಹೊರಟು ಹೋಗಿದ್ದಾರೆ. ಮನೆಯ ಮುದ್ದು ಮಾಣಿಕ್ಯವನ್ನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನಾದ್ರೂ ಕುಡಿದು ಗಾಡಿ ಓಡಿಸುವವರಿಗೆ ತಕ್ಕ ಶಾಸ್ತಿ ಆಗಬೇಕಿದೆ. ಅಮಾಯಕರ ಜೀವಕ್ಕೆ ಗ್ಯಾರಂಟಿ ಬೇಕಿದೆ.