
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ l ಲೋಕಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ
ಓದೇಶ ಸಕಲೇಶಪುರ
ರಾಮನಗರ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–275 ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಇಲ್ಲಿಯವರೆಗೆ ₹438 ಕೋಟಿ ಟೋಲ್ ಸಂಗ್ರಹಿಸಿದೆ.
ದೇಶದ ಹೆದ್ದಾರಿಗಳಲ್ಲಿ ಸಂಗ್ರಹವಾಗುತ್ತಿರುವ ಟೋಲ್ ಕುರಿತು ಸಂಸದ ಅಸಾದುದ್ದೀನ್ ಒವೈಸಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್ ಮಾಹಿತಿಯೂ ಇದೆ. ಆ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಹೆದ್ದಾರಿಯುದ್ದಕ್ಕೂ ಮೂರು ಟೋಲ್ ಸಂಗ್ರಹ ಕೇಂದ್ರಗಳಿವೆ. ಈ ಪೈಕಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಮತ್ತು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಕೇಂದ್ರದಲ್ಲಿ ಒಟ್ಟು ₹278.91 ಕೋಟಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರಿನ ಕೇಂದ್ರದಲ್ಲಿ ₹159.37 ಕೋಟಿ ಟೋಲ್ ಸಂಗ್ರಹವಾಗಿದೆ.
118 ಕಿ.ಮೀ. ಉದ್ದ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದ್ದ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಮಾರ್ಚ್‌ನಲ್ಲಿ ಉದ್ಘಾಟಿಸಿದ್ದರು. ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ ಇಂದಿಗೆ 20 ತಿಂಗಳು ಕಳೆದಿದೆ.
ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯದಲ್ಲಿ 58 ಕಿ.ಮೀ ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ ವ್ಯಾಪಿಸಿದೆ.
ಪ್ರಯಾಣಿಕರ ಸುರಕ್ಷತೆಗೆ ಆರಂಭದಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದರಿಂದ ಆರಂಭಿಕ 9 ತಿಂಗಳಲ್ಲಿ 595 ಅಪಘಾತಗಳು ಹೆದ್ದಾರಿಯಲ್ಲಿ ಸಂಭವಿಸಿದ್ದವು. ಇದರಲ್ಲಿ 158 ಮಂದಿ ಜೀವ ಕಳೆದುಕೊಂಡು 538 ಜನ ಗಾಯಗೊಂಡಿದ್ದರು. ಬಳಿಕ ವೇಗದ ಮಿತಿಯನ್ನು ಪ್ರತಿ ಗಂಟೆಗೆ 120 ಕಿ.ಮೀ.ಗೆ ಇಳಿಸಲಾಯಿತು. ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿ ಮಿತಿ ಮೀರಿದವರಿಂದ ದಂಡ ಸಂಗ್ರಹಿಸಲಾಗುತ್ತಿದೆ.
ತಲೆ ಎತ್ತದ ಮೇಲ್ಸೇತುವೆ
‘ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮತ್ತು ಪ್ರಯಾಣಿಕರ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು ಇನ್ನೂ ಕೆಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಹೆದ್ದಾರಿಯ ಕೆಲವೆಡೆ ಸರ್ವೀಸ್ ರಸ್ತೆ ಇಲ್ಲ. ಜನರು ಹೆದ್ದಾರಿ ದಾಟಲು ಪಾದಚಾರಿ ಮೇಲ್ಸೇತುವೆಗಳು ಇನ್ನೂ ತಲೆ ಎತ್ತಿಲ್ಲ. ಇದರಿಂದಾಗಿ ಪಾದಚಾರಿಗಳು ಹೆದ್ದಾರಿ ಬೇಲಿಗಳನ್ನು ತುಂಡರಿಸಿ ಅಪಾಯ ಲೆಕ್ಕಿಸದೆ ರಸ್ತೆ ದಾಟುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಕೆಲ ಮೂಲಸೌಕರ್ಯಗಳನ್ನು ಪ್ರಾಧಿಕಾರ ಇನ್ನೂ ಒದಗಿಸಿಲ್ಲ’ ಎನ್ನುತ್ತಾರೆ ಕಾರು ಚಾಲಕ ಚೇತನ್.
3 ಸಲ ಪರಿಷ್ಕರಣೆ
ಕಳೆದ 20 ತಿಂಗಳಲ್ಲಿ ಹೆದ್ದಾರಿಯಲ್ಲಿ ಮೂರು ಸಲ ಟೋಲ್ ಪರಿಷ್ಕರಿಸ ಲಾಗಿದೆ. ಇದೇ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬಂದಿರುವಂತೆ ಸದ್ಯ ಒಂದು ಕಾರಿನ ಏಕಮುಖ ಸಂಚಾರಕ್ಕೆ ₹170 ಹಾಗೂ ದ್ವಿಮುಖ ಸಂಚಾರ ₹255 ಇದೆ. ಏಳು ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನದ ಏಕಮುಖ ಸಂಚಾರಕ್ಕೆ ₹1,362 ಹಾಗೂ ದ್ವಿಮುಖ ಸಂಚಾರಕ್ಕೆ ₹1,660 ಟೋಲ್ ನಿಗದಿಪಡಿಸಲಾಗಿದೆ.