
ರಾಮನಗರ ಪೊಲೀಸರ ನಡೆಗೆ ಸಿಟ್ಟು: ಕೊಲೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ ನ್ಯಾಯಾಧೀಶರು
ರಾಮನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ನ್ಯಾಯಾಧೀಶರು ಮೂವರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಆರೋಪಿಗಳು ಜೈಲಿನಿಂದ ಹೊರಗೆ ಬರುವಂತಾಗಿದೆ. ಈ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪೊಲೀಸರ ಮುಂದಿನ ನಡೆ ಏನು ಎಂಬುವುದು ಕಾದು ನೋಡಬೇಕಿದೆ.

ನವೆಂಬರ್ 26 ರಂದು ಕೆಲ ವಿದ್ಯಾರ್ಥಿಗಳು ಬ್ಯಾಚುಲರ್ ಪಾರ್ಟಿಗಾಗಿ ರಾಮನಗರ ಹೊರವಲಯದಲ್ಲಿನ ರೆಸಾರ್ಟ್ಗೆ ಬಂದಿದ್ದರು. ಈ ವೇಳೆ ರೆಸಾರ್ಟ್ ಒಳಗೆ ಮೂವರು ಆರೋಪಿಗಳು ನುಗ್ಗಿದ್ದರು. ಎ1 ಚಂದು ಎಂಬುವನು ಪುನೀತ್ ಮೇಲೆ ಹಲ್ಲೆ ಮಾಡಿದ್ದನು. ಬಳಿಕ ಮೂವರು ಸೇರಿಕೊಂಡು ಪುನಿತ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಹಲ್ಲೆ ಆರೋಪದಲ್ಲಿ ಚಂದ್ರು, ಮುರುಳಿ ಮತ್ತು ನಾಗೇಶ್ನನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರು ರಿಮ್ಯಾಂಡ್ (ಪೊಲೀಸ್ ಬಂಧನ ವಿಸ್ತರಣಾ) ಅರ್ಜಿಯನ್ನು ರಾಮನಗರದ ಸೀನಿಯರ್ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು.
ಆದರೆ, ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದ ಕಲಾಪ ಪ್ರಾರಂಭವಾದರೂ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಪೊಲೀಸರು ಹಾಜರಾಗಲಿಲ್ಲ. ಇದರಿಂದ ಕೋಪಗೊಂಡು ತನಿಖೆ ಯಾಕೆ ಬೇಕು ಅಂತ ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನೂ ಬಿಟ್ಟು ಕಳಿಸುವಂತೆ ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಅವರು ಡಿಸೆಂಬರ್ 6 ರಂದು ಆದೇಶ ಹೊರಡಿಸಿದರು.
ಇದೆ ವೇಳೆ, ಪೊಲೀಸರು ಅರ್ಜಿಸಲ್ಲಿಸಿದರೆ ಆಗ ಬಂಧಿಸುವಂತೆ ಆದೇಶಿಸಿದರು. ನ್ಯಾಯಾಲಯದ ಆದೇಶ ಸಿಕ್ಕ ಬೆನ್ನಲ್ಲೆ ಮೂವರು ಕೊಲೆ ಆರೋಪಿಗಳನ್ನು ರಾಮನಗರ ಜೈಲು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸದೆಯೇ ಮೂವರು ಆರೋಪಿಗಳು ಜೈಲಿನಿಂದ ಹೊರ ಬಂದಿದ್ದಾರೆ. ನ್ಯಾಯಾದೀಶರ ಈ ಆದೇಶ ದೇಶದಲ್ಲೇ ಅತಿ ಅಪರೂಪ ಆದೇಶವಾಗಿದೆ.