National

ಮೋದಿ ಮಿತವ್ಯಯದ ಕರೆಗೆ ಕಾಂಗ್ರೆಸ್​​ನಲ್ಲಿ ಭಿನ್ನರಾಗ: ಒಬ್ಬರು ಪ್ರಧಾನಿ ಹೇಳಿದ್ದು ಸರಿ ಎಂದರೆ, ಮತ್ತೊಬ್ಬರಿಂದ ವಿರೋಧ!

ಜಾಗತಿಕ ತೈಲ ಸಂಕಷ್ಟದ ಹಿನ್ನೆಲೆಯಲ್ಲಿ ಮೋದಿ ಮಿತವ್ಯಯ ಕರೆಗೆ ಕಾಂಗ್ರೆಸ್‌ನಲ್ಲಿಯೇ ಭಿನ್ನರಾಗ ಕೇಳಿಬಂದಿದೆ. ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಪೆಟ್ರೋಲ್ ಮತ್ತು ಚಿನ್ನ ಬಳಕೆ ಕಡಿಮೆ ಮಾಡಲು ಬೆಂಬಲಿಸಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಲೆ ಏರಿಕೆಗೆ ಮೋದಿಯೇ ಕಾರಣ ಎಂದು ತಿರುಗೇಟು ನೀಡಿದ್ದಾರೆ. ದೇಶ ದೊಡ್ಡ ದುರಂತದ ಸ್ಥಿತಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.

ಮೋದಿ ಮಿತವ್ಯಯದ ಕರೆಗೆ ಕಾಂಗ್ರೆಸ್​​ನಲ್ಲಿ ಭಿನ್ನರಾಗ: ಒಬ್ಬರು ಪ್ರಧಾನಿ ಹೇಳಿದ್ದು ಸರಿ ಎಂದರೆ, ಮತ್ತೊಬ್ಬರಿಂದ ವಿರೋಧ!

ಮೋದಿ ಮಿತವ್ಯಯದ ಕರೆಗೆ ಕಾಂಗ್ರೆಸ್​​ನಲ್ಲಿ ಭಿನ್ನರಾಗ

ತುಮಕೂರು/ಬೆಂಗಳೂರು, ಮೇ 15: ಜಾಗತಿಕ ತೈಲ ಸಂಕಷ್ಟದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಗೊಳಿಸಿ, ಸಾರ್ವಜನಿಕ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದರು. ಜೊತೆಗೆ ಇನ್ನು ಒಂದು ವರ್ಷ ಚಿನ್ನ ಖರೀದಿಸದಂತೆಯೂ ಮನವಿ ಮಾಡಿದ್ದರು. ಅವರ ಈ ಕರೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು, ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಸ್ವತಃ ಮೋದಿ ವಿರುದ್ದವೇ ಟೀಕಾ ಪ್ರಹಾರ ನಡೆಸಿದ್ದವು. ಈ ನಡುವೆ ಪ್ರಧಾನಿಗಳ ಮಿತವ್ಯಯ ಸಂದೇಶಕ್ಕೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ, ಕಾಂಗ್ರೆಸ್​​ ನಾಯಕ ಟಿ.ಬಿ. ಜಯಚಂದ್ರ ಸಹಮತ ವ್ಯಕ್ತಪಡಿಸಿರೋದು ಕೆಲವರ ಹುಬ್ಬೇರಿಸಿದೆ.

ಟಿ.ಬಿ.ಜಯಚಂದ್ರ ಹೇಳಿದ್ದೇನು?

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನಿಂದ ಆಗುತ್ತಿರುವ ಅನಾಹುತಕ್ಕೆ ನಾವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಯುದ್ಧದ ದುಷ್ಪರಿಣಾಮದಿಂದ ಬೆಲೆ ಏರಿಕೆ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಮಿತವಾಗಿ ಬಳಸಬೇಕು. ಡಾಲರ್ಸ್​ ರೂಪದಲ್ಲಿ ಹಣ ನೀಡಿ ನಾವು ತೈಲ ಖರೀದಿಸಬೇಕಾಗುವ ಕಾರಣ ಕೇಂದ್ರದವರು ಎಲ್ಲರೂ ಸಹಕಾರ ಕೊಡಬೇಕೆಂದು ಕೇಳಿದ್ದಾರೆ. ವಾಸ್ತವತೆಯನ್ನು ಅರಿತು ಎಲ್ಲರೂ ಸಹಕಾರ ನೀಡಬೇಕು ಎಂದು ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಜೊತೆಗೆ ಚಿನ್ನ ಖರೀದಿಯಲ್ಲೂ ಕಡಿವಾಣ ಹಾಕಿ ಅಂತ ಮೋದಿ ಕರೆ ನೀಡಿದ್ದಾರೆ. ವಿಶ್ವದಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳೇ ಹೆಚ್ಚು ಚಿನ್ನ ಖರೀದಿಸುತ್ತಾರೆ. 18 ಗ್ರಾಂ ಚಿನ್ನದ ತಾಳಿ ಬದಲು 8 ಗ್ರಾಂ ತಾಳಿ ಮಾಡಿಸಿಕೊಳ್ಳಿ. ಪ್ರಧಾನಿ ಮೋದಿ ಸಲಹೆ ಸ್ವೀಕರಿಸಿ ನಾವೂ ಜವಾಬ್ದಾರಿ ವಹಿಸೋಣ ಎಂದವರು ಕರೆ ನೀಡಿದ್ದಾರೆ.

‘ಬೆಲೆ ಏರಿಕೆ ಮೋದಿ ಕೊಡುಗೆ’

ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್​​ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆ. ಇದು ಬಿ.ಎಸ್​.ಯಡಿಯೂರಪ್ಪನವರಿಗೆ ಹಾಗೂ ನನಗೂ ಗೊತ್ತಿದೆ. ಬೇರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಬಂದಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಅದಕ್ಕಾಗಿಯೇ ವಿದ್ಯುತ್ ಉಳಿಸಿ, ಪೆಟ್ರೋಲ್ ಬಳಸಬೇಡಿ ಅಂತಿದ್ದಾರೆ. ಇಂಧನ ಬಳಸದೇ ದಿನನಿತ್ಯ ಜೀವನ ಮಾಡುವುದು ಹೇಗೆ? ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳು ಕಡಿತ ಮಾಡಿದ್ದಾರೆ. ಇದು ಆಗಬಹುದು, ಆದರೆ ಜನಸಾಮಾನ್ಯರು ಹೇಗೆ ಇರಲು ಸಾಧ್ಯ . ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ದೇಶ ದೊಡ್ಡ ದುರಂತದ ಸ್ಥಿತಿಗೆ ಬಂದಿದೆ ಎಂದೂ ಅವರು ಆರೋಪಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button