
ಮಾಡೆಲ್ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ ಜಬಲ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನನಗೆ ಇನ್ನೂ ಸರ್ಕಾರಿ ಬಂಗಲೆ ನೀಡಿಲ್ಲ ಎಂದು ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆಲ್‌ರೌಂಡರ್ ವಿಜಯ್ ಶಂಕರ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.
ಬೆಂಗಳೂರು, ಮೇ 22:
ಮಾಡೆಲ್ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣಕ್ಕೆ (Twisha Sharmas death case) ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಆಕೆಯ ಪತಿ ಸಮರ್ಥ್ ಸಿಂಗ್ ಜಬಲ್ಪುರ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ. ತ್ವಿಶಾ ನಿಗೂಢ ಸಾವಿನ ಬಳಿಕ ಆಕೆಯ ಕುಟುಂಬಸ್ಥರು ಸಮರ್ಥ್ ಮತ್ತು ಆತನ ಕುಟುಂಬಸ್ತರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆಯ ಗಂಭೀರ ಆರೋಪ ಮಾಡಿದ್ದರು. ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು. ನಿರೀಕ್ಷಣಾ ಜಾಮೀನು ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾದ ಕಾರಣ ಸಮರ್ಥ್ ಸಿಂಗ್ ಜಬಲ್ಪುರದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಈ ಹೈಪ್ರೊಫೈಲ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ನನಗೆ ಇನ್ನೂ ಸರ್ಕಾರಿ ಬಂಗಲೆ ನೀಡಿಲ್ಲ; ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಹಲವು ತಿಂಗಳು ಕಳೆದಿದ್ದರೂ ತಮಗೆ ಇದುವರೆಗೂ ಅಧಿಕೃತ ಸರ್ಕಾರಿ ಬಂಗಲೆಯನ್ನು ಹಂಚಿಕೆ ಮಾಡದಿರುವ ಕುರಿತು ಮಾಜಿ ಸಚಿವ ಹಾಗೂ ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷದ ನಾಯಕರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಮತ್ತು ಸೌಲಭ್ಯಗಳು ಸಿಗಬೇಕು. ಆದರೆ ಸರ್ಕಾರವು ರಾಜಕೀಯ ದ್ವೇಷದಿಂದ ತಮಗೆ ಮನೆ ಹಂಚಿಕೆ ಮಾಡದೆ ಸತಾಯಿಸುತ್ತಿದೆ ಎಂದು ಅವರು ದೂರಿದ್ದಾರೆ. ಬಂಗಲೆ ಹಂಚಿಕೆಯಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಈ ಧೋರಣೆಯು ಸಾಂವಿಧಾನಿಕ ಹುದ್ದೆಗೆ ನೀಡುವ ಗೌರವವೇ ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).
ಬೆಂಗಳೂರಲ್ಲಿ CJP ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ ಬೆಂಗಳೂರು ಪೊಲೀಸರು
ದೇಶದೆಲ್ಲೆಡೆ ಈಗ ಕಾಕ್ರೋಚ್ ಜನತಾ ಪಾರ್ಟಿಯ ಸದ್ಧು ಜೋರಾಗಿದೆ. ಇತ್ತ ರಾಜ್ಯಕ್ಕೂ ಕಾಕ್ರೋಚ್ ಜನತಾ ಪಾರ್ಟಿ ಕಾಲಿಟ್ಟಿದೆ. ಬೆಂಗಳೂರಿನ ಟೌನ್‌ಹಾಲ್ ಬಳಿ ಮೇ 24ರ ಅಂದರೆ ಭಾನುವಾರ ಬೆಳಗ್ಗೆ 11 ಗಂಟೆಗೆ “ಶಾಂತಿಯುತ ಮಾನವ ಸರಪಳಿ” ಕಾರ್ಯಕ್ರಮ ನಡೆಯಲಿದೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ಟೌನ್‌ಹಾಲ್ ಬಳಿ ಇಂತಹ ಯಾವುದೇ ಕಾರ್ಯಕ್ರಮ ಆಯೋಜನೆಗೆ ಇದುವರೆಗೆ ಮನವಿ ಬಂದಿಲ್ಲ, ಒಂದು ವೇಳೆ ಮನವಿ ಬಂದರೂ, ಟೌನ್‌ಹಾಲ್ ವ್ಯಾಪ್ತಿಯಲ್ಲಿ ಸಭೆ-ಸಮಾವೇಶಗಳಿಗೆ ಅನುಮತಿ ನೀಡುವುದಿಲ್ಲ ಸ್ಪಷ್ಟಣೆ ನೀಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಇಂತಹ ಸುಳ್ಳು ಅಥವಾ ದೃಢೀಕರಣವಾಗದ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು. ಮೇ 24ರಂದು ಜನರು ಟೌನ್‌ಹಾಲ್ ಬಳಿ ಜಮಾಯಿಸಬಾರದು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).
ನಟ ಮೋಹನ್‌ಲಾಲ್ ಭಾವುಕ
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಚಿತ್ರದ ವಿಶೇಷ ಪ್ರದರ್ಶನವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಈ ಸ್ಕ್ರೀನಿಂಗ್ ಮುಗಿಯುತ್ತಿದ್ದಂತೆ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಅದ್ಭುತ ಕಥಾಹಂದರವನ್ನು ಕಂಡು ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರೇಕ್ಷಕರ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು ನಟ ಮೋಹನ್‌ಲಾಲ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೋಹನ್‌ಲಾಲ್ ಅವರು ಭಾವುಕರಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).
ದಿಢೀರ್ ನಿವೃತ್ತಿ ಘೋಷಿಸಿದ ಆಲ್‌ರೌಂಡರ್ ವಿಜಯ್ ಶಂಕರ್
ಭಾರತ ತಂಡದ ಮಾಜಿ ಆಲ್‌ರೌಂಡರ್ ವಿಜಯ್ ಶಂಕರ್ ಅವರು ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಗಳಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಜಾಗತಿಕ ಮಟ್ಟದ ಇತರ ಫ್ರಾಂಚೈಸಿ ಲೀಗ್‌ಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಹುಡುಕುವ ಮತ್ತು ಆಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತಮಿಳುನಾಡು ಮೂಲದ 35 ವರ್ಷದ ವಿಜಯ್ ಶಂಕರ್ ಭಾರತ ತಂಡದ ಪರ 12 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ.



