LatestTransport

ವಾನಹಗಳ ಫಿಟ್​ನೆಸ್ ಪರೀಕ್ಷೆಗೆ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್: ಹೇಗಿರುತ್ತೆ ಹೊಸ ವ್ಯವಸ್ಥೆ?

ಕರ್ನಾಟಕದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಾಹನಗಳ ಫಿಟ್‌ನೆಸ್ ಪರೀಕ್ಷೆಗೆ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಡಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಪಾರದರ್ಶಕತೆ ಹೆಚ್ಚಿ ಭ್ರಷ್ಟಾಚಾರ ಕಡಿಮೆಯಾಗುವ ನಿರೀಕ್ಷೆಯಿದೆ. ನೆಲಮಂಗಲದಲ್ಲಿ ರಾಜ್ಯದ ಮೊದಲ ಸ್ವಯಂಚಾಲಿತ ಪರೀಕ್ಷಾ ಕೇಂದ್ರವನ್ನು ಈಗಾಗಲೇ ಆರಂಭಿಸಲಾಗಿದೆ.

ವಾನಹಗಳ ಫಿಟ್​ನೆಸ್ ಪರೀಕ್ಷೆಗೆ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್: ಹೇಗಿರುತ್ತೆ ಹೊಸ ವ್ಯವಸ್ಥೆ?

ಬೆಂಗಳೂರು, ಫೆಬ್ರವರಿ 24: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಫಿಟ್‌ನೆಸ್ ಪ್ರಮಾಣಪತ್ರಗಳಿಗಾಗಿ ಬರುವ ವಾಹನಗಳ ಮ್ಯಾನುವಲ್ ಫಿಟ್​ನೆಸ್ ಪರೀಕ್ಷೆಗೆ ಬದಲಾಗಿ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ಗಳನ್ನು ಆರಂಭಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಸರ್ಕಾರಿ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ಗಳನ್ನು (ATS) ಸ್ಥಾಪಿಸಲು ಉದ್ದೇಶಿಸಲಾಗಿದೆ.

ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ಗಳು ನೇರವಾಗಿ ಪಾಸ್ ಅಥವಾ ಫೇಲ್ ಪ್ರಮಾಣಪತ್ರಗಳನ್ನು ನೀಡಲಿವೆ. ದಕ್ಷತೆ, ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಈ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ರಾಜ್ಯದ ಮೊದಲ ಅಂತಹ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ ಅನ್ನು ನೆಲಮಂಗಲದಲ್ಲಿ ಪರಿಚಯಿಸಲಾಗಿದೆ.

ಪ್ರಸ್ತುತ, ಫಿಟ್‌ನೆಸ್ ಪ್ರಮಾಣಪತ್ರ ನವೀಕರಣಕ್ಕಾಗಿ ಬರುವ ವಾಹನಗಳನ್ನು ಮ್ಯಾನುವಲ್ ಆಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ಆಟೊಮ್ಯಾಟಿಕ್​ಗೆ ಬದಲಾಗುವ ಗುರಿಯನ್ನು ಹೊಂದಿದ್ದೇವೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಎಎಂ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಖಾಸಗಿ ವಾಹನಗಳಿಗೆ, ವಾಹನ ನೋಂದಣಿ ದಿನಾಂಕದಿಂದ 15 ವರ್ಷಗಳವರೆಗೆ ಎಫ್‌ಸಿ ಮಾನ್ಯವಾಗಿರುತ್ತದೆ ಮತ್ತು ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಬೇಕು.

ಮತ್ತೊಂದೆಡೆ, ವಾಣಿಜ್ಯ ವಾಹನಗಳು ನೋಂದಣಿ ದಿನಾಂಕದಿಂದ ಎಂಟು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ತಮ್ಮ ಎಫ್‌ಸಿಗಳನ್ನು ನವೀಕರಿಸಬೇಕು. ಎಂಟು ವರ್ಷಗಳ ನಂತರ, ವಾರ್ಷಿಕವಾಗಿ ನವೀಕರಣಗಳು ಅಗತ್ಯವಾಗಿರುತ್ತದೆ.

ಆಟೊಮ್ಯಾಟಿಕ್ ಎಫ್​ಸಿ ರಿನೀವಲ್ ಹೇಗೆ?

ಆಟೊಮ್ಯಾಟಿಕ್ ಟೆಸ್ಟಿಂಗ್​ನಲ್ಲಿ ವಾಹನಗಳನ್ನು ಯಂತ್ರದ ಮೂಲಕ ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ಮಾನವ ಹಸ್ತಕ್ಷೇಪಗಳಿಗೆ ಇಲ್ಲಿ ಯಾವುದೇ ಅವಕಾಶವಿಲ್ಲ. ಅನೇಕ ಪರೀಕ್ಷೆಗಳು ಇರುತ್ತವೆ. ಸೂಕ್ತವಾದ ಮತ್ತು ಎಲ್ಲಾ ನಿಗದಿತ ಮಾನದಂಡಗಳನ್ನು ಅನುಸರಿಸುವ ವಾಹನಗಳಿಗೆ ಮಾತ್ರ ಫಿಟ್​ನೆಟ್ ಪಾಸ್ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಮತ್ತು ರಸ್ತೆಗಳಲ್ಲಿ ಕಾರ್ಯನಿರ್ವಹಿಸಬಹುದು ಎಂಬುದನ್ನು ಖಾತರಿಪಡಿಸಲಾಗುತ್ತದೆ ಎಂದು ಯೋಗೀಶ್ ಎಎಂ ಹೇಳಿದ್ದಾರೆ.

ಇದಲ್ಲದೆ, ಸ್ಥಳಾವಕಾಶ ಲಭ್ಯವಿರುವ 13 ಸ್ಥಳಗಳಲ್ಲಿ ಆಟೊಮ್ಯಾಟಿಕ್ ಟೆಸ್ಟಿಂಗ್ ಸ್ಟೇಶನ್​ಗಳನ್ನು ಸ್ಥಾಪಿಸಲು ಇಲಾಖೆ ಯೋಜಿಸಿದೆ ಮತ್ತು ಅವುಗಳನ್ನು ಡಿಬಿಎಫ್‌ಒಟಿ ಮಾದರಿಯಡಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸ್ಥಳಾವಕಾಶ ಲಭ್ಯವಿಲ್ಲದ 19 ಸ್ಥಳಗಳಲ್ಲಿ, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಐದು ಕ್ಲಸ್ಟರ್‌ಗಳಾಗಿ ಗುಂಪು ಮಾಡಿ ಬಿಒಒ ಮಾದರಿಯಡಿಯಲ್ಲಿ ಕೆಲಸಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button