
‘ಬಸ್ಸಿಲ್ಲ..ಬಸ್ಸಿಲ್ಲ..ದಿನನಿತ್ಯ ಓಡಾಡಲು ಬಸ್ಸಿಲ್ಲ’ ಎಂದ ಬಿಜೆಪಿಗೆ ಧನ್ಯವಾದಗಳು ಎಂದ ಕಾಂಗ್ರೆಸ್!
ಬೆಂಗಳೂರು: “ಬಸ್ಸಿಲ್ಲ..ಬಸ್ಸಿಲ್ಲ..ದಿನನಿತ್ಯ ಓಡಾಡಲು ಬಸ್ಸಿಲ್ಲ..!! – ಇದು ಬಹುಪಾಲು ಕನ್ನಡಿಗರ ದಿನನಿತ್ಯದ ಬವಣೆ” ಎಂದು ಟ್ವೀಟ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ನೀಡಿದೆ.
ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬಿಜೆಪಿ ತಮ್ಮ ಅವಧಿಯ ಆಡಳಿತದಲ್ಲಿ ಸಾರಿಗೆ ಸಂಸ್ಥೆಗಳನ್ನು ಅಳಿವಿನಂಚಿಗೆ ತಂದು ಈಗ ಸಾರಿಗೆ ಸಂಸ್ಥೆಗಳ ಅಭಿವೃದ್ಧಿ ಬಗ್ಗೆ ಟ್ಟೀಟ್ ಮಾಡಿ ತಮ್ಮ ಆಡಳಿತದಲ್ಲಿ ಮಾಡಲಾಗದಿರುವ ಕಾರ್ಯಗಳನ್ನು ನಾವು ಹೇಗೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿರುವುದಕ್ಕೆ ನಾವು ಹರ್ಷ ವ್ಯಕ್ತಪಡಿಸಿ ಸಮಗ್ರ ಮಾಹಿತಿಗಳನ್ನು ಮತ್ತೊಮ್ಮೆ ತಮಗೆ ನೀಡುತ್ತಿದ್ದೇವೆ ಎಂದಿದೆ.
ಬಿಜೆಪಿ ಟ್ಟೀಟ್ ಮಾಡಿರುವ ಘಟನೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಬಸ್ಸಿನ ಕೊರತೆಯಿಂದ ಆದ ಘಟನೆ ಅಲ್ಲ. ದಿನಾಂಕ: 19/11/2024 ಮಂಗಳವಾರ ಬೆಳಿಗ್ಗೆ 07-15ಕ್ಕೆ ಮೂಡಿಗೆರೆ ಬಸ್ ನಿಲ್ದಾಣಕ್ಕೆ ಧರ್ಮಸ್ಥಳ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಹೋಗುವ ಚಳ್ಳಕೆರೆ ಘಟಕದ ವಾಹನ ಬರಬೇಕಾಗಿದ್ದು, ದಿನಾಂಕ:18/11/24 ರಂದು ರಾತ್ರಿ ಧರ್ಮಸ್ಥಳ ದಿಂದ ಹೆಚ್ಚಿನ ಜನಸಂದಣಿ ಇದ್ದುದರಿಂದ ಈ ವಾಹನವನ್ನು ರಾತ್ರಿ ಕಾರ್ಯಚರಣೆ ಮಾಡಿರುತ್ತಾರೆ, ಇದರಿಂದ ಮೂಡಿಗೆರೆ ಬಸ್ ನಿಲ್ದಾಣದಿಂದ ಸುಮಾರು15 ನಿಮಿಷಗಳ ಕಾಲ ಚಿಕ್ಕಮಗಳೂರು ಕಡೆಗೆ ಬಸ್ ಇಲ್ಲದಂತೆ ಆಗಿರುತ್ತದೆ ಎಂದಿದೆ.
ತಕ್ಷಣ ಮೂಡಿಗೆರೆ ಘಟಕದ ವಾಹನವನ್ನು 07-30 ಕ್ಕೆ ಕಾರ್ಯಾಚರಣೆ ಮಾಡಿ ಜನಸಂದಣಿಗೆ ಅನುಗುಣವಾಗಿ ವಾಹನ ಒದಗಿಸಲಾಗಿರುತ್ತದೆ. ಇದು ಬೇರೆ ವಿಭಾಗದಿಂದ ಬರುವ ಬಸ್ ತಡವಾಗಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ನಡೆದಿರುವ ಘಟನೆ. ಕಳೆದ ಒಂದು ವರ್ಷದಲ್ಲಿ 3450 ಹೊಸ ಬಸ್ಸುಗಳ ಸೇರ್ಪಡೆಯಾಗಿದ್ದರೂ ಬಸ್ಸುಗಳ ಕೊರತೆ ಎಂದರೆ ಅದು ತಮ್ಮ ನಿಕಟಪೂರ್ವ ಆಡಳಿತಕ್ಕೆ ಹಿಡಿದ ಕೈಗನ್ನಡಿಯಲ್ಲವೇ ಎಂದು ಬಿಜೆಪಿಗೆ ಪ್ರಕ್ರಿಯಿಸಿದೆ.
ತಮ್ಮ ಆಡಳಿತಾವಧಿಯಲ್ಲಿ 3800 ಅನುಸೂಚಿಗಳನ್ನೇ ರದ್ದು ಮಾಡಿರುವುದು ತಮ್ಮ ಸಾಧನೆಯೇ? ತಮ್ಮ ಅವಧಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ ಪ್ರತಿ ದಿನದ 1,56,000 ಟ್ರಿಪ್‌ಗಳ ಸಂಖ್ಯೆಯನ್ನು ನಾವು 1,72,000 ಟ್ರಿಪ್ ಗಳಿಗೆ ಹೆಚ್ಚಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಿ ಜನರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುತ್ತಿರುವುದು ತಮ್ಮ ಗಮನಕ್ಕಿದೆಯೇ? ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ ಹೊರತುಪಡಿಸಿ ಬೇರೆ ಯಾವುದೇ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಬಿಟ್ಟು ಹೋಗಿದ್ದು ನಿಮ್ಮ ಸಾಧನೆಯೇ? ಎಂದು ಪ್ರಶ್ನಿಸಿದೆ.
ಇತ್ತೀಚಿಗೆ ವೀಡಿಯೋ ಒಂದನ್ನು ಟ್ವೀಟ್ ಮಾಡಿದ್ದ ಬಿಜೆಪಿ ಬಸ್ಸಿಲ್ಲ..ಬಸ್ಸಿಲ್ಲ..ದಿನನಿತ್ಯ ಓಡಾಡಲು ಬಸ್ಸಿಲ್ಲ..!! – ಇದು ಬಹುಪಾಲು ಕನ್ನಡಿಗರ ದಿನನಿತ್ಯದ ಬವಣೆ!! ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಬಸ್ಸುಗಳು ಇಲ್ಲವೆಂದು ದಿನನಿತ್ಯ ಗೋಳಾಡುತ್ತಿದ್ದಾರೆ ಎಂದಿತ್ತು.
ಸಚಿವ ರಾಮಲಿಂಗ ರೆಡ್ಡಿ ಅವರೆ, ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದ ಮೇಲೆ ರೂಟ್ ಮೇಲೆ ಕಡಿಮೆ ಬಸ್ಸುಗಳೇಕೆ ಸಂಚರಿಸುತ್ತಿವೆ..? ಡಿಪೋದಲ್ಲಿ ನಿಂತಿರುವ ಬಸ್ಸುಗಳಿಗೆ ಡೀಸೆಲ್ ಹಾಕಿಸಲು ಸರ್ಕಾರದ ಬಳಿ ಹಣವಿಲ್ಲವೇ ಎಂದು ಪ್ರಶ್ನಿಸಿತ್ತು.
.