
ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ದಿವಾಳಿಯಾಗಿರುವ ಪಾಕಿಸ್ತಾನ (Pakistan) ಇದೀಗ ಭಾರತದ (India) ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಹಾಗೂ ಭಾರತೀಯ ಸಶಸ್ತ್ರ ಪಡೆಗಳನ್ನು ನಾಶ ಮಾಡಲು ಸಂಚು ರೂಪಿಸಿದೆ ಎಂದು ಭಾರತೀಯ ಗುಪ್ತಚರ ಏಜೆನ್ಸಿಗಳು (Intelligence Agencies) ವರದಿ ನೀಡಿವೆ.
ಕಾಶ್ಮೀರದ (Jammu and Kashmir) ಕಣಿವೆಯಲ್ಲಿ ಭಾರತ ಸರ್ಕಾರದ ಪ್ರತಿಷ್ಠೆಯನ್ನು ಹಾಳುಮಾಡುವ ರೀತಿಯಲ್ಲಿ ಸಂಚು ರೂಪಿಸಲು ಪಾಕಿಸ್ತಾನವು ಪ್ರಪಂಚದಾದ್ಯಂತದ ತನ್ನ ರಾಯಭಾರ ಕಚೇರಿಗಳನ್ನು ಕೇಳಿದ್ದು, ಸಂಚು ರೂಪಿಸುವ ರಹಸ್ಯ ಟಿಪ್ಪಣಿಯನ್ನು ರಾಯಭಾರ ಕಚೇರಿಗಳಿಗೆ ಕಳುಹಿಸಿದೆ ಎನ್ನಲಾಗಿದೆ.
`ಕಾಶ್ಮೀರ ಒಗ್ಗಟ್ಟಿನ ದಿನ’ದಂದು (ಫೆಬ್ರವರಿ 5 ರಂದು ಪಾಕಿಸ್ತಾನವು ಆಚರಿಸುವ ದಿನ), ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ತನ್ನ ಎಲ್ಲಾ ರಾಯಭಾರ ಕಚೇರಿಗಳಿಗೆ ಫ್ಯಾಕ್ಸ್ ಮತ್ತು ಇಮೇಲ್ಗಳನ್ನು ಕಳುಹಿಸಿದೆ. ಅದರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ನಾಶ ಮಾಡುವ ಯೋಜನೆಗಳ ಬಗ್ಗೆ ವಿವರಿಸಿದೆ ಎಂದು ಗುಪ್ತಚರ ಏಜೆನ್ಸಿ ವಿವರಿಸಿದೆ.
ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಜಮ್ಮು ಮತ್ತು ಕಾಶ್ಮೀರದ ಕೆಲವು ಪೊಲೀಸರು ಭಯೋತ್ಪಾದಕರು ಹಾಗೂ ಜೈಶ್ ಎ ಮೊಹಮ್ಮದ್ (JEM) ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ಭಯೋತ್ಪಾದಕ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದುಬಂದಿದೆ.
ಈ ನಡುವೆ ಶುಕ್ರವಾರ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಿಷೇಧಿತ ಜೈಶ್ ಎ ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 6 ಭಯೋತ್ಪಾದಕರನ್ನ ಬಂಧಿಸಿದೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಗಳು ಗ್ರೆನೇಡ್ ದಾಳಿ, ಅಮಾಯಕ ನಾಗರಿಕರನ್ನು ಬೆದರಿಸುವುದು, ಪಿಆರ್ಐ ಸದಸ್ಯರು, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕುಲ್ಗಾಮ್ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವನ್ನು ಹಾಳುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.