LatestNational

ಮಾಜಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌ ನಿಧನ

Former PM Dr Manmohan Singh death: ಎರಡು ಬಾರಿ ಪ್ರಧಾನಿಯಾಗಿ ಹಾಗೂ ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿ ಎನಿಸಿಕೊಂಡಿದ್ದಾರೆ.

Dr.Manmohan Singh Passes Away: ಮಾಜಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌ ನಿಧನ

ನವದೆಹಲಿ, (ಡಿಸೆಂಬರ್ 26): ನರೇಂದ್ರ ಮೋದಿಗೂ ಮುನ್ನ ಎರಡು ಅವಧಿಗಳ ಕಾಲಕ್ಕೆ ದೇಶದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಮನಮೋಹನ್‌ ಸಿಂಗ್‌ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ರಾತ್ರಿ 8:06 ಗಂಟೆ ಸುಮಾರಿಗೆ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 9:51ಕ್ಕೆ ಅವರು ನಿಧನರಾದರು ಎಂದು ಏಮ್ಸ್ ತಿಳಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ದೆಹಲಿಯತ್ತ ತೆರಳುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಬೆಳಗಾವಿ ವಿಮಾನ ನಿಲ್ದಾಣದಿಂದ ದಿಲ್ಲಿಯತ್ತ ಹೊರಟ್ಟಿದ್ದಾರೆ.

ಡಾ. ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಸಿಂಗ್, 2024ರ ಏಪ್ರಿಲ್​ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಇದ್ದರು.

ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಸಿಂಗ್, 1991ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.

ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು. ಅವರ ಕೃತಿ ಭಾರತದ ರಫ್ತು ಸ್ಥಿತಿ ಮತ್ತು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ “India’s Export Trends and Prospects for Self-Sustained Growth” [Clarendon Press, Oxford, 1964] ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆಯಾಗಿತ್ತು.

ಡಾ. ಮನಮೋಹನಸಿಂಗ್ ಅವರ ಶೈಕ್ಷಣಿಕ ಜ್ಞಾನ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಾಗೂ ದೆಹಲಿಯ ಪ್ರತಿಷ್ಠಿತ ಆರ್ಥಿಕ ಶಾಲೆಯಲ್ಲಿ ಬೋಧಕರಾಗಿ ಸಾಕಾರಗೊಂಡವು. ಯು.ಎನ್.ಸಿ.ಟಿ.ಎ.ಡಿ. ಸಚಿವಾಲಯದಲ್ಲಿ ಅವರು ಕೆಲಕಾಲ ಸೇವೆ ಸಲ್ಲಿಸಿದ್ದರು. ಇದರ ಫಲವಾಗಿ 1987ರಿಂದ 1990ರವರೆಗೆ ಅವರನ್ನು ಜೀನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಮೂಡಿತು. 1991ರಿಂದ 1996ರವರೆಗೆ ಡಾ. ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ. ಜನಪ್ರಿಯದೃಷ್ಟಿಕೋನದಿಂದ ನೋಡುವುದಾದರೆ ಭಾರತದ ಅಂದಿನ ದಿನಗಳು ಡಾ. ಸಿಂಗ್ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಡಾ. ಸಿಂಗ್ ಅವರು ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

 

Show More

Related Articles

Leave a Reply

Your email address will not be published. Required fields are marked *

Back to top button