
ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಇಂದು (ಭಾನುವಾರ) ದುಬೈನ (Dubai) ಆಸ್ಪತ್ರೆಯಲ್ಲಿ ನಿಧನರಾದರು.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ (79) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮುಷರಫ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದೆರಡು ವಾರಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು. ಈ ಸಂಬಂಧ ನವೆಂಬರ್ 19ರಂದು ವಿಚಾರಣೆ ನಂತರದಲ್ಲಿ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು. ಅದರಂತೆ ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿತ್ತು.
ಸೇನಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ಸೇನಾ ಬಲ ಬಳಸಿಕೊಂಡು ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ರಕ್ತಪಾತರಹಿತ ದಂಗೆ ನಡೆಸಿ, ಅಧಿಕಾರವನ್ನು ಕಿತ್ತುಕೊಂಡಿದ್ದರು. ಬಳಿಕ 2001ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಆರಂಭಿಸಿ ಮುಖಭಂಗ ಅನುಭವಿಸಿದ್ದರು.