AggregatorNationalTransport

ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ? ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ

ಸರ್ಕಾರವು ಈಗ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ ಆರಂಭಿಸಲು ಯೋಜಿಸಿದೆ. ಕೇಂದ್ರ ಸಚಿವ ಅಮಿತ್ ಶಾ ಸಂಸತ್​​ನಲ್ಲಿ ಇಂದು ಈ ವಿಷಯ ತಿಳಿಸಿದ್ದಾರೆ. ನಮ್ಮ ಯಾತ್ರಿ ಮಾದರಿಯಲ್ಲಿ ಈ ಸಹಕಾರಿ ಟ್ಯಾಕ್ಸಿ ಸರ್ವಿಸ್ ಇರಲಿದೆ. ರೇಡ್​​ನಿಂದ ಸಿಗುವ ಎಲ್ಲಾ ಆದಾಯವು ಚಾಲಕರಿಗೆ ಹೋಗುತ್ತದೆ. ಓಲಾ, ಊಬರ್​​ನಂತಹ ಕಾರ್ಪೊರೇಟ್ ಕಂಪನಿಗಳಿಗೆ ನಿಕಟ ಪೈಪೋಟಿ ಸೃಷ್ಟಿಯಾಗಲಿದೆ.

ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ? ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ ಟ್ಯಾಕ್ಸಿ

ನವದೆಹಲಿ, ಮಾರ್ಚ್ 27: ಸಹಕಾರಿ ಪ್ರಯೋಗ ಈಗ ಕ್ಯಾಬ್ ಸರ್ವಿಸ್ ಕ್ಷೇತ್ರಕ್ಕೂ ಅಡಿ ಇಡುತ್ತಿದೆ. ಸರ್ಕಾರವು ಸಹಕಾರಿ ತತ್ವದ ಅಡಿಯಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಲು ಯೋಜಿಸುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸರ್ವಿಸ್ (Sahakari Taxi service) ಆರಂಭಿಸುವ ಸಾಧ್ಯತೆ ಇದೆ. ಕೇಂದ್ರ ಸಚಿವ ಅಮಿತ್ ಶಾ ಇಂದು ಬುಧವಾರ ಸಂಸತ್​​​ನಲ್ಲಿ ಈ ಪ್ರಸ್ತಾಪ ತೆರೆದಿಟ್ಟಿದ್ದಾರೆ. ಈ ಪ್ಲಾನ್ ಜಾರಿಗೆ ಬಂದರೆ ಓಲಾ, ಊಬರ್ ಇತ್ಯಾದಿ ರೇಡ್ ಹೇಲಿಂಗ್ ಪ್ಲಾಟ್​​ಫಾರ್ಮ್​​ಗಳಿಗೆ ನಡುಕ ಸೃಷ್ಟಿಯಾಗಬಹುದು.

ವರದಿ ಪ್ರಕಾರ, ಟ್ಯಾಕ್ಸಿ ಸೇವೆ ಕೇವಲ ಕಾರ್​ಗೆ ಮಾತ್ರ ಸೀಮಿತವಾಗಿರಲ್ಲ. ದ್ವಿಚಕ್ರ, ತ್ರಿಚಕ್ರ ವಾಹನಗಳನ್ನೂ ಟ್ಯಾಕ್ಸಿ ಸೇವೆಗೆ ಒಳಗೊಳ್ಳಲಾಗುತ್ತದೆ. ಅಂದರೆ, ಬೈಕ್ ಟ್ಯಾಕ್ಸಿ, ಆಟೊರಿಕ್ಷಾ, ಕ್ಯಾಬ್ ಸರ್ವಿಸ್ ಇರುತ್ತದೆ.

ಚಾಲಕರಿಗೆ ಎಲ್ಲಾ ಆದಾಯ ಹೋಗುತ್ತದೆ…?
ಓಲಾ ಮತ್ತು ಊಬರ್ ಪ್ಲಾಟ್​​ಫಾರ್ಮ್​​ಗಳಲ್ಲಿ ಒಂದು ರೇಡ್​​ನಲ್ಲಿ ಗ್ರಾಹಕರಿಂದ ಪಡೆಯಲಾಗುವ ಹಣದಲ್ಲಿ ಕಂಪನಿಗಳಿಗೆ ಸಾಕಷ್ಟು ಹಣ ಹೋಗುತ್ತದೆ. ಬಹಳಷ್ಟು ಚಾಲಕರು ಈ ಬಗ್ಗೆ ನಿತ್ಯವೂ ಅಳಲು ತೋಡಿಕೊಳ್ಳುವುದಿದೆ. ಆದರೆ, ಸರ್ಕಾರ ಯೋಜಿಸಿರುವ ಸಹಕಾರಿ ಟ್ಯಾಕ್ಸಿಯು ಲಾಭ ರಹಿತ ಉದ್ದೇಶದಿಂದ ನಡೆಸಲಾಗುತ್ತದೆ. ಒಂದು ರೇಡ್​​ನ್ಲಲಿ ಸಿಗುವ ಎಲ್ಲಾ ಹಣವೂ ನೇರವಾಗಿ ಚಾಲಕರಿಗೆ ಹೋಗುತ್ತದೆ.

ಬಹುತೇಕ ಇದು ನಮ್ಮ ಯಾತ್ರಿ ಮಾದರಿಯಲ್ಲಿ ರೂಪಿಸಲಾಗುತ್ತಿರುವ ಯೋಜನೆಯಾಗಿದೆ. ಬೆಂಗಳೂರು ಮೊದಲಾದ ಹಲವೆಡೆ ನಮ್ಮ ಯಾತ್ರಿ ಟ್ಯಾಕ್ಸಿ ಸರ್ವಿಸ್ ಚಾಲನೆಯಲ್ಲಿದೆ. ಇದು ಖಾಸಗಿ ಕಂಪನಿಯಾದರೂ, ಇದರಲ್ಲಿ ಬಹುತೇಕ ಎಲ್ಲಾ ಆದಾಯವು ಚಾಲಕರಿಗೆ ಸಂದಾಯವಾಗುತ್ತದೆ.

ಭಾರತದಲ್ಲಿ ಬೇಡಿಕೆಗಿಂತ ಕಡಿಮೆ ಕ್ಯಾಬ್​​ಗಳ ಲಭ್ಯತೆ?


ಭಾರತದಲ್ಲಿ ಟ್ಯಾಕ್ಸಿ ಮಾರುಕಟ್ಟೆ ಈಗ 23 ಬಿಲಿಯನ್ ಡಾಲರ್ ಗಾತ್ರದ್ದಾಗಿದೆ. ಇದು ಇನ್ನೈದು ವರ್ಷದಲ್ಲಿ ಬಹುತೇಕ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಆನ್ಲೈನ್ ಕ್ಯಾಬ್ ಬುಕಿಂಗ್​​ಗೆ ಭಾರತದಲ್ಲಿ ಸದ್ಯ ಸಾಕಷ್ಟು ಬೇಡಿಕೆ ಇದೆ. ಈ ಬೇಡಿಕೆ ಪೂರೈಸುವಷ್ಟು ಸಂಖ್ಯೆಯಲ್ಲಿ ಸದ್ಯ ಭಾರತದಲ್ಲಿ ಕ್ಯಾಬ್​​ಗಳಿಲ್ಲ ಎಂದು ಹೇಳಲಾಗುತ್ತಿದೆ.

ಹೀಗಾಗಿ, ಹೆಚ್ಚೆಚ್ಚು ಕ್ಯಾಬ್ ಅಗ್ರಿಗೇಟರ್​​ಗಳು, ಕ್ಯಾಬ್ ಚಾಲಕರು ಈ ಉದ್ಯಮಕ್ಕೆ ಬರಬೇಕಿದೆ. ಓಲಾ ಮತ್ತು ಊಬರ್ ಸಂಸ್ಥೆಗಳು ಈಗಲೂ ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿವೆ. ರ್ಯಾಪಿಡೋ ಸಂಸ್ಥೆ ಕೂಡ ಪ್ರವೇಶ ಮಾಡಿದೆ. ನಮ್ಮ ಯಾತ್ರಿ ಹಂತ ಹಂತವಾಗಿ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಆದರೆ, ಬೇಡಿಕೆ ಪೂರೈಸುವಷ್ಟು ಸಂಖ್ಯೆಯಲ್ಲಿ ಕ್ಯಾಬ್​​ಗಳಿಲ್ಲ. ಈಗ ಸರ್ಕಾರದಿಂದ ನಡೆಸಲಾಗುವ ಸಹಕಾರಿ ಟ್ಯಾಕ್ಸಿ ಸೇವೆಯು ಹೊಸ ಕ್ಯಾಬ್​​ಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದಾ ನೋಡಬೇಕು.

Show More

Related Articles

Leave a Reply

Your email address will not be published. Required fields are marked *

Back to top button