
ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ
ಚೀನಾದೊಂದಿಗೆ (China) ಸಂಪರ್ಕವಿರುವ 200ಕ್ಕೂ ಅಧಿಕ ಆ್ಯಪ್‌ಗಳನ್ನು (Apps) ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಅವುಗಳಲ್ಲಿ 138 ಬೆಟ್ಟಿಂಗ್ (Betting) ಅಪ್ಲಿಕೇಶನ್‌ಗಳು ಹಾಗೂ 94 ಸಾಲ (Loan) ನೀಡುವ ಅಪ್ಲಿಕೇಶನ್‌ಗಳು ಒಳಗೊಂಡಿವೆ.
ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ವಾರ ಗೃಹ ವ್ಯವಹಾರಗಳ ಸಚಿವಾಲಯದಿಂದ ಈ ಆದೇಶವನ್ನು ಸ್ವೀಕರಿಸಿದೆ. ಈ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿದೆ.
ವರದಿಗಳ ಪ್ರಕಾರ ಚೀನಾದೊಂದಿಗೆ ಸಂಪರ್ಕ ಹೊಂದಿರುವ ಸಾಲ ನೀಡುವಂತಹ ಅಪ್ಲಿಕೇಶನ್‌ಗಳು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಲವನ್ನು ತೆಗೆದುಕೊಳ್ಳುವಂತೆ ಆಮಿಷ ಒಡ್ಡುತ್ತವೆ. ಬಳಿಕ ವಾರ್ಷಿಕವಾಗಿ ಸಾಲದ ಬಡ್ಡಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಾಲ ತೀರಿಸಲು ಸಾಧ್ಯವಾಗದೇ ಹೋದಾಗ ಕಿರುಕುಳ ನೀಡಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಬೆದರಿಕೆ ಹಾಕುತ್ತವೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕೆಲವರು ಇಂತಹ ಅಪ್ಲಿಕೇಶನ್‌ಗಳಿಂದ ಸಾಲವನ್ನು ತೆಗೆದುಕೊಂಡು ಹಾಗೂ ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಹಲವಾರು ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿಕೊಂಡಿವೆ.
ಈ ದೂರುಗಳನ್ನಾಧರಿಸಿ ಗೃಹ ವ್ಯವಹಾರಗಳ ಸಚಿವಾಲಯ 6 ತಿಂಗಳುಗಳ ಹಿಂದೆ 26 ಚೀನೀ ಸಾಲ ನೀಡುವ ಅಪ್ಲಿಕೇಶನ್‌ಗಳ ಮೇಲೆ ಪರಿಶೀಲನೆ ನಡೆಸಿತ್ತು. ಆದರೂ ಇ-ಸ್ಟೋರ್‌ಗಳಲ್ಲಿ ಇಂತಹ 94 ಅಪ್ಲಿಕೇಶನ್‌ಗಳು ಲಭ್ಯವಿದ್ದು, ಇವು ತರ್ಡ್ ಪಾರ್ಟಿ ಲಿಂಕ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಎಂಬುದು ಬೆಳಕಿಗೆ ಬಂದಿದೆ.
ಈ ಹಿಂದೆಯೂ ಕೇಂದ್ರ ಸರ್ಕಾರ ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಹಲವಾರು ಚೀನೀ ಆ್ಯಪ್‌ಗಳನ್ನು ನಿಷೇಧಿಸಿತ್ತು. 2020ರ ಜೂನ್‌ನಿಂದ ಟಿಕ್‌ಟಾಕ್, ಶೇರ್‌ಇಟ್, ವೀಚ್ಯಾಟ್, ಹೆಲೋ, ಲೈಕೀ, ಯುಸಿ ನ್ಯೂಸ್, ಬಿಗೊ ಲೈವ್, ಯುಸಿ ಬ್ರೌಸರ್, ಇಎಸ್ ಫೈಲ್ ಎಕ್ಸ್‌ಪ್ಲೋರರ್, ಮಿ ಕಮ್ಯೂನಿಟಿ ಸೇರಿದಂತೆ 200ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿತ್ತು.