
ಸಂಸದೆ ಸುಮಲತಾ (MP Sumalatha Ambareesh) ಜೊತೆ ಇನ್ಮುಂದೆ ಗುರುತಿಸಿಕೊಳ್ಳಬೇಡಿ, ಸುಮಲತಾ ಬೆಂಬಲಿಗರು ನಡೆಸುವ ಸಭೆಗೆ ಯಾರು ಹೋಗಬೇಡಿ. ಸುಮಲತಾ ಬೆಂಬಲಿಗರು ಕಾಂಗ್ರೆಸ್ಸಿಗರನ್ನು ನಿಮ್ಮ ಸಭೆಗೆ ಕರೆಯಲೂಬೇಡಿ ಎಂದು ಮಂಡ್ಯದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ಬಳಿಕ ಎಚ್ಚೆತ್ತಿರುವ ಮಂಡ್ಯ ಜಿಲ್ಲೆಯ ಕಾಂಗ್ರೆಸ್ (Mandya Congress) ನಾಯಕರು ಈ ರೀತಿಯ ಆದೇಶವನ್ನು ಹೊರಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದರು. ಇಷ್ಟಾದ್ರು ಸಹ ಕಾಂಗ್ರೆಸ್‍ನ ಕೆಲ ಮುಖಂಡರು ಸುಮಲತಾ ಅಂಬರೀಶ್ ಜೊತೆ ಹಾಗೂ ಆಪ್ತರ ಜೊತೆ ಗುರುತಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರಿಸಿದೆ. ಸುಮಲತಾ ಅವರ ಬೆಂಬಲಿಗರು ನಡೆಸುವ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸುವುದು ಹಾಗೂ ಅವರ ಜೊತೆ ಗುರುತಿಸಿಕೊಳ್ಳುವುದು ಸರಿಯಲ್ಲ.
ಸುಮಲತಾ ಅವರ ರಾಜಕೀಯ ತೀರ್ಮಾನಗಳಿಗೆ ನಮ್ಮ ಪಕ್ಷದ ಅಭಿಪ್ರಾಯವಿಲ್ಲ. ಎಂಪಿ ಚುನಾವಣೆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಸುಮಲತಾ ಅವರು ತಟಸ್ಥವಾಗಿದ್ದಾರೆ. ಕಾಂಗ್ರೆಸ್ ಆ ಎಲ್ಲ ಎಲೆಕ್ಷನ್‍ಗಳಲ್ಲಿ ಹೋರಾಟ ಮಾಡಿದೆ. ಆದ್ದರಿಂದ ಅವರ ಸಭೆಗಳಿಗೆ ಹೋಗುವುದು ಸಮಂಜಸವಲ್ಲ. ಅದರ ಅವಶ್ಯಕತೆಯೂ ಇಲ್ಲ. ಸುಮಲತಾ ಅವರ ಮಾತುಗಳು ಎಲ್ಲಾ ಬಿಜೆಪಿ ಸರ್ಕಾರ (BJP Government) ಪರವಾಗಿ ಇವೆ. ಕಾಂಗ್ರೆಸ್‍ನ್ನು ಬೆಂಬಲಿಸುವ ಒಂದು ಹೇಳಿಕೆಯನ್ನು ಅವರು ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಮುಖಂಡರು ಅವರ ಸಭೆಗಳಿಗೆ ಹಾಗೂ ಅವರೊಂದಿಗೆ ಗುರುತಿಸಿಕೊಳ್ಳುವುದು ಸರಿಯಲ್ಲ ಎಂದು ಪತ್ರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಉಲ್ಲೇಖ ಮಾಡಿದ್ದಾರೆ.