
ಕಳೆದ ವರ್ಷ ಟ್ವಿಟ್ಟರ್ (Twitter) ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಸ್ವಾಧೀನಪಡಿಸಿಕೊಂಡ ಬಳಿಕ ಜನರು ತಮ್ಮ ಖಾತೆಗಳಲ್ಲಿ ಬ್ಲೂ ಟಿಕ್ ಮಾರ್ಕ್ (Blue Tick) ಪಡೆಯಲು ಇನ್ನು ಮುಂದೆ ಪಾವತಿಸಬೇಕಾಗುತ್ತದೆ ಎಂದು ಘೋಷಿಸಿದ್ದರು. ಅದರಂತೆ ಹಲವು ದೇಶಗಳಲ್ಲಿ ಈ ನಿಯಮ ಪ್ರಾರಂಭವಾಗಿತ್ತು. ಇದೀಗ ಭಾರತದಕ್ಕೂ (India) ಟ್ವಿಟ್ಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾರ್ಕ್ ಪಡೆಯಲು ಪಾವತಿ ಮಾಡುವ ನಿಯಮ ಬಂದಿದೆ.
ಇದೀಗ ಭಾರತದಲ್ಲಿ ಬ್ಲೂ ಟಿಕ್ ಮಾರ್ಕ್ ಅನ್ನು ಐಒಎಸ್ ಹಾಗೂ ಆಂಡ್ರಾಯ್ಡ್ ಸಾಧನಗಳನ್ನು ಬಳಸುವವರು ಖರೀದಿ ಮಾಡಬಹುದು ಮಾತ್ರವಲ್ಲದೇ ಟ್ವಿಟ್ಟರ್‌ನ ವೆಬ್‌ಸೈಟ್ ಅನ್ನು ಬಳಸುವವರು ಕೂಡಾ ಇದನ್ನು ಖರೀದಿಸಬಹುದಾಗಿದೆ. ಭಾರತದಲ್ಲಿ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರು ಬ್ಲೂ ಟಿಕ್ ಅನ್ನು ಖರೀದಿಸಲು ಮಾಸಿಕವಾಗಿ 900 ರೂ.ಯನ್ನು ನಿಗದಿಪಡಿಸಲಾಗಿದೆ. ವೆಬ್‌ಸೈಟ್ ಬಳಕೆದಾರರು ಇದನ್ನು ಕೇವಲ 650 ರೂ.ಗೆ ಖರೀದಿ ಮಾಡಬಹುದು.
ಬಳಕೆದಾದದರು ಟ್ವಿಟ್ಟರ್ ಬ್ಲೂ ಟಿಕ್‌ನ ವಾರ್ಷಿಕ ಚಂದಾದಾರಿಕೆ ಖರೀದಿಸಲು ಬಯಸಿದರೆ 6,800 ರೂ. ವೆಚ್ಚವಾಗುತ್ತದೆ. ಇದು ತಿಂಗಳಿಗೆ ಅಂದಾಜು 566 ರೂ. ಆಗುತ್ತದೆ. ಆದರೆ ಈ ಪ್ಲಾನ್ ಕೇವಲ ವೆಬ್‌ಸೈಟ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದ್ದು, ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಾಗಿಲ್ಲ.
ಈ ಹಿಂದೆ ಟ್ವಿಟ್ಟರ್‌ನಲ್ಲಿ ನೀಲಿ ಟಿಕ್ ಅನ್ನು ಪ್ರಸಿದ್ಧ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕ ವ್ಯಕ್ತಿಗಳ ಅಧಿಕೃತ ಖಾತೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದೀಗ ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಬೂದು ಬಣ್ಣದ ಟಿಕ್ ಮಾರ್ಕ್ ಹಾಗೂ ಪ್ರಸಿದ್ಧ ಕಂಪನಿಗಳ ಖಾತೆಗಳಿಗೆ ಹಳದಿ ಬಣ್ಣದ ಟಿಕ್ ಮಾರ್ಕ್ ನೀಡಲಾಗಿದೆ. ಇದೀಗ ನೀಲಿ ಬಣ್ಣದ ಟಿಕ್ ಮಾರ್ಕ್ ಪಡೆಯಲು ಶುಲ್ಕ ಪಾವತಿಸುವ ನಿಯಮ ತಂದಿರುವುದರಿಂದ ಸಾಮಾನ್ಯ ವ್ಯಕ್ತಿಗಳು ಕೂಡಾ ಹಣವನ್ನು ಪಾವತಿಸಿ ಇದನ್ನು ಪಡೆಯಬಹುದು.