LatestStateTransport

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ವ್ಯವಸ್ಥೆ

ಬೆಂಗಳೂರು: ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್ ಮಾಡಿ ಟಿಕೆಟ್ ನೀಡುವ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಬಳಕೆಯು ಪ್ರಾಯೋಗಿಕವಾಗಿ 150 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆರಂಭಗೊಳ್ಳಲಿದೆ. ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ಎಲ್ಲ ಬಸ್‌ಗಳ ನಿರ್ವಾಹಕರ ಕೈಗೆ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಬರಲಿದೆ.

 

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಎನ್‌ಡಬ್ಲ್ಯುಆರ್‌ಟಿಸಿ) ಮತ್ತು ಬಿಎಂಟಿಸಿಯ ಕೆಲವು ಮಾರ್ಗಗಳಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ತಂತ್ರಜ್ಞಾನದ ಮೂಲಕ ಟಿಕೆಟ್‌ ದರ ಪಾವತಿ ಮಾಡುವ ಪದ್ಧತಿ ಜಾರಿಯಲ್ಲಿದ್ದರೂ ಅದು ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ವ್ಯವಸ್ಥೆಯಲ್ಲ. ಕ್ಯೂಆರ್‌ ಕೋಡ್‌ ಮುದ್ರಣವನ್ನು ನಿರ್ವಾಹಕರು ಕುತ್ತಿಗೆಗೆ ನೇತು ಹಾಕಿಕೊಂಡಿರುತ್ತಾರೆ.
ಸ್ಕ್ಯಾನ್‌ ಮಾಡಿ ಟಿಕೆಟ್‌ ದರ ಪಾವತಿಸಿದವರಿಗೆ ಟಿಕೆಟ್‌ ನೀಡುತ್ತಾರೆ. ಕೆಎಸ್‌ಆರ್‌ಟಿಸಿಯಲ್ಲಿ ಈ ಪದ್ಧತಿಯ ಬದಲು ಟಿಕೆಟ್‌ ಮಷೀನ್‌ನಲ್ಲೇ ಕ್ಯೂಆರ್‌ ಕೋಡ್‌ ಒದಗಿಸುವ ತಂತ್ರಜ್ಞಾನ ಇರಲಿದೆ.

‘ಕೆಎಸ್‌ಆರ್‌ಟಿಸಿಯಲ್ಲಿ 83 ಘಟಕಗಳಿವೆ. ಸದ್ಯ ಎಲೆಕ್ಟ್ರಿಕ್‌ ಟಿಕೆಟ್‌ ಮಷೀನ್‌ಗಳನ್ನು (ಇಟಿಎಂ) ಬಳಸಲಾಗುತ್ತಿದೆ. ಇನ್ನು ಮುಂದೆ ಡಿಜಿಟಲ್‌ ಪೇಮೆಂಟ್‌ ಎನೇಬಲ್‌ (ಡಿಪಿಇ) ಇರುವ ಸ್ಮಾರ್ಟ್‌ ಇಟಿಎಂಗಳು ಬಳಕೆಯಾಗಲಿವೆ. ಫೋನ್‌ ಪೇ, ಗೂಗಲ್‌ ಪೇ ಸಹಿತ ಯುಪಿಐ ಆಧಾರಿತ ಪಾವತಿ ಸ್ವೀಕರಿಸಿದಾಗ ಆ ಮೊತ್ತವು ಸಂಬಂಧಪಟ್ಟ ಡಿಪೊ ಖಾತೆಗೆ ಜಮೆ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವಾರದೊಳಗೆ ಪರೀಕ್ಷೆ:

‘ಪ್ರೀಮಿಯಂ ಬಸ್‌, ಸಾಮಾನ್ಯ ಬಸ್‌, ಎಕ್ಸ್‌ಪ್ರೆಸ್‌ ಬಸ್‌, ನಗರ ಸಾರಿಗೆ ಬಸ್‌ ಸೇರಿ ಕೆಎಸ್‌ಆರ್‌ಟಿಸಿಯ ಒಟ್ಟು 150 ಬಸ್‌ಗಳಲ್ಲಿ ಮುಂದಿನವಾರ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ಪ್ರಾಯೋಗಿಕವಾಗಿ ಬಳಸಲಾಗುವುದು. ‘ಶಕ್ತಿ’ ಯೋಜನೆಯ ಪ್ರಯಾಣಿಕರು ಇರುವ ಬಸ್‌ಗಳಲ್ಲಿ ಈ ಮಷೀನ್‌ ಬಳಕೆಯಿಂದ ಸಮಸ್ಯೆ ಆಗುತ್ತದೆಯೇ? ಇತರ ಬಸ್‌ಗಳಲ್ಲಿ ಯಾವ ಸಮಸ್ಯೆಯಾಗಲಿದೆ ಎಂದು ಪರೀಕ್ಷೆ ನಡೆಸಲಾಗುತ್ತದೆ. ನಗದು ನೀಡಿದಾಗಲೂ ಇದೇ ಮಷೀನ್‌ ಮೂಲಕ ಟಿಕೆಟ್‌ ನೀಡುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತದೆಯೇ ಎಂಬುದು ಸೇರಿ ಎಲ್ಲ ರೀತಿಯ ಪರೀಕ್ಷೆಗಳು ನಡೆಯಲಿವೆ. ಸಮಸ್ಯೆಗಳು ಕಂಡು ಬಂದರೆ ಅದನ್ನು ನಿವಾರಿಸಿದ ಬಳಿಕ ಎಲ್ಲ ಬಸ್‌ಗಳಲ್ಲಿ ‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌’ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಚಿಲ್ಲರೆಯೇ ತಲೆನೋವು:

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಚಿಲ್ಲರೆ ಮೊತ್ತ ನೀಡಿ ಟಿಕೆಟ್‌ ಪಡೆಯುವುದು ದೊಡ್ಡ ಸಮಸ್ಯೆಯಾಗಿದೆ.
ಈ ಸಮಸ್ಯೆ ಪರಿಹಾರಕ್ಕೆ ಫೋನ್‌ ಪೇ, ಗೂಗಲ್‌ ಪೇ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ ಬೇಗ ಬರಬೇಕು’ ಎನ್ನುತ್ತಾರೆ ಬಸ್‌ ಪ್ರಯಾಣಿಕ ಯೋಗೀಶ್‌ ಕಾಂಚನ.

ಬಸ್‌ ನಿರ್ವಾಹಕರು ವಾಪಸ್‌ ನೀಡಬೇಕಿರುವ ಚಿಲ್ಲರೆ ಹಣವನ್ನು, ಕೆಲವೊಮ್ಮೆ ಜಾಸ್ತಿ ಇದ್ದರೂ ಟಿಕೆಟ್‌ ಹಿಂಬದಿ ಬರೆದು ಬಿಡುತ್ತಾರೆ. ಎಷ್ಟೋ ಬಾರಿ ಇಳಿಯುವ ಗಡಿಬಿಡಿಯಲ್ಲಿ ಟಿಕೆಟ್‌ ಹಿಂಬದಿ ಬರೆದಿರುವುದು ಮರೆತು ಹೋಗಿರುತ್ತದೆ. ನೆನಪಾಗುವ ಹೊತ್ತಿಗೆ ಬಸ್‌ ಮುಂದಕ್ಕೆ ಚಲಿಸಿರುತ್ತದೆ. ಚಿಲ್ಲರೆಗಾಗಿ ನಿರ್ವಾಹಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳಗಳೂ ಆಗಿವೆ. ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌ ಬಂದರೆ ಮರೆವು, ಜಗಳಗಳಿಗೆ ಮುಕ್ತಿ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ನಗದುರಹಿತ ವ್ಯವಸ್ಥೆ

‘ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷೀನ್‌ ವ್ಯವಸ್ಥೆ ಅನುಷ್ಠಾನಗೊಳಿಸುವುದರಿಂದ ನಗದು ರಹಿತ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಯುಪಿಐ ಬಳಸುವುದು ಈಗ ಎಲ್ಲ ಕಡೆ ಸಾಮಾನ್ಯವಾಗಿರುವುದರಿಂದ ಜನರಿಗೆ ಈ ಪಾವತಿ ವ್ಯವಸ್ಥೆ ಹೊಸತಲ್ಲ. ಕೆಎಸ್‌ಆರ್‌ಟಿಸಿಯಲ್ಲಿಯೂ ಈ ವ್ಯವಸ್ಥೆ ಜಾರಿಯಾದರೆ ಹೆಚ್ಚಿನ ಪ್ರಯಾಣಿಕರು ಯುಪಿಐ ಮೂಲಕವೇ ಪಾವತಿ ಮಾಡಲಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button