LatestPoliticsState

“5.8 ಕೋಟಿ ರೇಷನ್ ಕಾರ್ಡ್ ರದ್ದು ಮಾಡಲು ಹೊರಟ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಚಕಾರವೆತ್ತದ ರಾಜ್ಯ ಬಿಜೆಪಿ ನಾಯಕರು!”

ಪ್ರಧಾನಿ ಮೋದಿ ನಿವಾಸದ ಮುಂದೆ ಪ್ರತಿಭಟಿಸುವಂತೆ ಬಿಜೆಪಿ ನಾಯಕರಿಗೆ ಸವಾಲೆಸೆದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಮುಖ್ಯಮಂತ್ರಿಗಳು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ ಅರ್ಹರಾದವರಿಗೆ ಯಾವುದೇ ರೀತಿಯಿಂದಲೂ ಪಡಿತರ ಕಾರ್ಡ್ ರದ್ದಾಗುವುದಿಲ್ಲ ಎಂದು. ಅನರ್ಹರು ಬಡವರ ಹೆಸರಿನಲ್ಲಿ ಕಾರ್ಡ್ ಹೊಂದಿದ್ದರೆ ಅವರ ಕಾರ್ಡ್ ಅನ್ನು ಮಾತ್ರ ರದ್ದು ಮಾಡಲಾಗುತ್ತದೆ. ಇಷ್ಟು ಸ್ಪಷ್ಟವಾಗಿ ಹೇಳಿದ್ದಾಗ್ಯೂ ಸಹ ಬಿಜೆಪಿ ಅವರಿಗೆ ವಿಷಯಾಂತರ ಮಾಡಿ ಜನರನ್ನು ದಾರಿತಪ್ಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚಾಳಿ ಕರಗತವಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ಸರ್ಕಾರಿ ನೌಕರಿಯಲ್ಲಿದ್ದು ಬಿಪಿ‌ಎಲ್ ಕಾರ್ಡ್ ಪಡೆಯುವುದು ನ್ಯಾಯವೇ? ಎಸ್.ಎಂ‌.ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ 2003 ರಲ್ಲಿ ನಾನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವನಾಗಿದ್ದಾಗ ನಗರ ಪ್ರದೇಶದಲ್ಲಿನ ಬಡವರಿಗೆ (Urban Poor ) ಮೊದಲ ಬಾರಿಗೆ ಬಿ.ಪಿ.ಎಲ್ ಕಾರ್ಡ್ ಗಳನ್ನು ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಅತೀ ಹೆಚ್ಚು ದಾಖಲೆ ಮಟ್ಟದ ರೇಷನ್ ಕಾರ್ಡ್ ಗಳನ್ನು ವಿತರಿಸಿದ್ದು ನನ್ನ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನಮ್ಮದು ಬಡವರ ಪರ ಇರುವ ಸರ್ಕಾರ ಕಾರ್ಪೊರೇಟ್ ಪರ ಇರುವ ಸರ್ಕಾರ ಅಲ್ಲ ಎಂದಿದ್ದಾರೆ.

“ಸದ್ದಿಲ್ಲದೇ ಕೇಂದ್ರ ಸರ್ಕಾರದಿಂದ ಪ್ರಹಾರ!”

5.8 ಕೋಟಿ ಕಾರ್ಡ್ ಗಳನ್ನು ರದ್ದು ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಬಗ್ಗೆ ಚಕಾರವೆತ್ತುವ ಎದೆಗಾರಿಕೆ ಅವರಲ್ಲಿದೆಯೇ? ಬಿ.ಪಿ.ಎಲ್ ಕಾರ್ಡ್ ರದ್ದು ಕುರಿತಂತೆ ನಮ್ಮ ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಾಜ್ಯ ಬಿಜೆಪಿಯ ಮಹಾನ್ ಹೋರಾಟಗಾರರೆಲ್ಲರೂ ಈಗ ಗಪ್-ಚುಪ್. ಪ್ರಹ್ಲಾದ್ ಜೋಷಿ, ವಿಜಯೇಂದ್ರ, ಅಶೋಕ್ , ಶೋಭಾ ಕರಂದ್ಲಾಜೆ ಇವರೆಲ್ಲಾ
ಕೇಂದ್ರದ ವಿರುದ್ಧ ಹೋರಾಟ ಮಾಡುವಿರಾ? ಎಂದು ರಾಮಲಿಂಗಾ ರೆಡ್ಡಿ ಸವಾಲೆಸಿದಿದ್ದಾರೆ.

ರಾಜ್ಯ ಬಿಜೆಪಿಯ ಅಧಿಕೃತ ಅಧ್ಯಕ್ಷರಾದ
ವಿಜಯೇಂದ್ರ ಅವರನ್ನು ಕೆಳಗಿಳಿಸಲು ಆತುರದಲ್ಲಿರುವ ಬಿಜೆಪಿ ಬಂಡಾಯ ಗುಂಪಿನ ಅಧ್ಯಕ್ಷರಾದ ಬಸವನಗೌಡ ಪಾಟಿಲ್ ಯತ್ನಾಳ್ ಅವರೇ ಇದಕ್ಕೆ ಏನಂತೀರಾ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ನಿಮ್ಮಲ್ಲೇ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ ನಾಯಕರೇ ಪ್ರಧಾನಿ ನಿವಾಸ 7-LKM ಮುಂದೆ ಧರಣಿ ಮಾಡಿ, ಬಿಪಿಎಲ್ ರದ್ದಾದ ಅರ್ಹರಿಗೆ ನ್ಯಾಯ ಕೊಡಿಸುವಿರಾ? ಎಂದು ಬಿಜೆಪಿ ನಾಯಕರಿಗೆ ರಾಮಲಿಂಗಾ ಸವಾಲೆಸೆದಿದ್ದಾರೆ.

.

Show More

Related Articles

Leave a Reply

Your email address will not be published. Required fields are marked *

Back to top button