
ವಿವಿಧ ರೀತಿಯ ಮೀನುಗಳಲ್ಲಿ ಸಿಗಡಿಯನ್ನು ಇಷ್ಟಪಡುವವರು ಹೆಚ್ಚಿನವರು ಇದ್ದಾರೆ. ಸಿಗಡಿ ಬಳಸಿಕೊಂಡು ಸಾಕಷ್ಟು ರೀತಿಯ ಖಾದ್ಯಗಳನ್ನೂ ಮಾಡಬಹುದು. ಸಿಗಡಿಯ ಸಾರು, ಫ್ರೈ, ಚಿಲ್ಲಿ, ಬಿರಿಯಾನಿಯೂ ಮಾಡಬಹುದು. ನಾವಿಂದು ಸ್ವಲ್ಪ ಭಿನ್ನವಾಗಿ ಸಿಗಡಿಯ ಗರಿಗರಿಯಾದ ಫ್ರೈ (Crispy Prawn Fry) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಈ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಸ್ವಚ್ಛಗೊಳಿಸಿದ ಸಿಗಡಿ ಮೀನು – 15-20
ಹಾಲು – ಅರ್ಧ ಕಪ್
ಮೈದಾ – 1 ಕಪ್
ಮೊಟ್ಟೆ – 2
ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಈರುಳ್ಳಿ – 2 (ಫೇಸ್ಟ್ ಮಾಡಿಟ್ಟುಕೊಳ್ಳಿ)
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕರಿ ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಬ್ರೆಡ್ ಕ್ರಂಬ್ಸ್ – 1 ಕಪ್
ಮಾಡುವ ವಿಧಾನ:
* ಮೊದಲಿಗೆ ಸಿಪ್ಪೆ ಸುಲಿದು ಸ್ವಚ್ಛಮಾಡಿಟ್ಟುಕೊಂಡ ಸಿಗಡಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಪಕ್ಕಕ್ಕಿಡಿ.
* ಈಗ ಇನ್ನೊಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಕದಡಿ.
* ಬಳಿಕ ಅದಕ್ಕೆ ಮೈದಾ ಮತ್ತು ಹಾಲನ್ನು ಹಾಕಿ ಗಟ್ಟಿಯಾದ ಮಿಶ್ರಣ ತಯಾರಿಸಿ.
* ನಂತರ ಈ ಮಿಶ್ರಣಕ್ಕೆ ಅರ್ಧ ಟೀಸ್ಪೂನ್ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೊಮ್ಮೆ ಕಲಸಿ.
* ಇನ್ನೊಂದು ಬಟ್ಟಲಿನಲ್ಲಿ ಬ್ರೆಡ್ ಕ್ರಂಬ್ಸ್ ಹರಡಿ ಇಟ್ಟಿರಿ.
* ಈಗ ಸಿಗಡಿ ಮೀನುಗಳನ್ನು ಮೈದಾ ಮಿಶ್ರಣಕ್ಕೆ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್ ಮೇಲೆ ರೋಲ್ ಮಾಡಿ.
* ಈಗ ಒಂದೊಂದೇ ಸಿಗಡಿಯನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ.
* ಸಿಗಡಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಎಣ್ಣೆಯಲ್ಲಿ ಕಾಯಿಸಿ. ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಒಂದು ತವಾ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹುರಿದುಕೊಳ್ಳಿ.
* ಬಳಿಕ ಫ್ರೈ ಮಾಡಿದ ಸಿಗಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ 5-6 ನಿಮಿಷ ಹುರಿಯಿರಿ.
* ಇದೀಗ ಕ್ರಿಸ್ಪಿ ಸಿಗಡಿ ಫ್ರೈ ಸವಿಯಲು ಸಿದ್ಧವಾಗಿದೆ.