
ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಇತ್ತೀಚೆಗಷ್ಟೆ ಪಕ್ಷದ ವಾರ್ಷಿಕ ಸಭೆ ನಡೆಸಿ ಬಿಜೆಪಿ ಮತ್ತು ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಆದರೆ ಇದೇ ಸಮಯದಲ್ಲಿ ಯುವಕನೊಬ್ಬ ವಿಜಯ್ ಮನೆಯ ಮೇಲೆ ಚಪ್ಪಲಿ ಎಸೆದು ಪರಾರಿಯಾಗಿದ್ದಾನೆ.

ತಮಿಳು ಚಿತ್ರರಂಗದ (Kollywood) ಸ್ಟಾರ್ ನಟ ವಿಜಯ್ (Thalapathy Vijay), ಇದೀಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದು, ತಮಿಳುನಾಡಿನ ರಾಜಕೀಯಕ್ಕೆ ಹೊಸ ದಿಕ್ಕು ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ವಿಜಯ್, ರಾಜಕೀಯ ಪ್ರವೇಶವನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ವಿರೋಧಿಸುತ್ತಿರುವವರೂ ಸಹ ಇದ್ದಾರೆ. ವಿಜಯ್ರ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಪ್ರಾರಂಭವಾಗಿ ಒಂದು ವರ್ಷವಾದ ಕಾರಣ ಮಹಾಬಲಿಪುರಂನ ರೆಸಾರ್ಟ್ ಒಂದರಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಚುನಾವಣಾ ತಂತ್ರ ನಿಪುಣ ಪ್ರಶಾಂತ್ ಕಿಶೋರ್ ಸಹ ಭಾಗಿಯಾಗಿದ್ದರು. ಇದು ತಮಿಳುನಾಡು ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮಹಾಬಲಿಪುರಂನಲ್ಲಿ ಕಾರ್ಯಕ್ರಮ ನಡೆಯುವಾಗ ಇತ್ತ, ಯುವಕನೊಬ್ಬ ವಿಜಯ್ರ ಮನೆಗೆ ಚಪ್ಪಲಿ ಎಸೆದಿದ್ದಾನೆ.
ಫೆಬ್ರವರಿ 26 ರಂದು ಯುವಕನೊಬ್ಬ ವಿಜಯ್ರ ಗೇಟಿನ ಒಳಕ್ಕೆ ಚಪ್ಪಲಿ ಎಸೆದು ಓಡಿಹೋಗಿದ್ದಾನೆ. ಈ ವೇಳೆ ವಿಜಯ್ರ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದುಕೊಂಡಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಭದ್ರತಾ ಸಿಬ್ಬಂದಿಯೇ ಹೇಳಿರುವುದಾಗಿ ವರದಿಯಾಗಿದೆ. ಆತ ವಿಜಯ್ ಮನೆಯ ಒಳಗೆ ಮಕ್ಕಳ ಚಪ್ಪಲಿಯನ್ನು ಎಸೆದಿದ್ದ ಎಂಬುದು ತಿಳಿದು ಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.
ಅದೇ ಯುವಕ ಮಾಧ್ಯಮವೊಂದರ ಜೊತೆ ಮಾತನಾಡಿ, ‘ನಾನು ಕೇರಳದ ಮಣಪ್ಪುರಂನವನು, ತಮಿಳುನಾಡಿನಲ್ಲಿ ಎಷ್ಟೋ ಜನ ಮಕ್ಕಳು ಚಪ್ಪಲಿ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ, ಅದನ್ನು ವಿಜಯ್ರ ಗಮನಕ್ಕೆ ತರಲೆಂದು ನಾನು ಅವರ ಮನೆಯ ಗೇಟಿನ ಒಳಕ್ಕೆ ಚಪ್ಪಲಿ ಎಸೆದೆ’ ಎಂದಿದ್ದಾನೆ. ತಾನು, ವಿಜಯ್ರ ಅಭಿಮಾನಿ ಎಂದು ಸಹ ಆ ಯುವಕ ಹೇಳಿಕೊಂಡಿದ್ದಾನೆ.
ಪಕ್ಷದ ವಾರ್ಷಿಕ ಸಭೆಯಲ್ಲಿ ಮಾತನಾಡಿರುವ ದಳಪತಿ ವಿಜಯ್, ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಮತ್ತು ಕೇಂದ್ರ ಸರ್ಕಾರದ ನಡುವೆ ಹಿಂದಿ ಭಾಷೆಯ ವಿಚಾರವಾಗಿ ನಿರಂತರ ಆರೋಪ-ಪ್ರತ್ಯಾರೋಪಗಳು ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಲೇ ಇವೆ. ಈ ವಿಚಾರವಾಗಿ ಮಾತನಾಡಿರುವ ವಿಜಯ್, ‘ಎರಡೂ ಪಕ್ಷದವರು ಹಿಂದಿ ವಿಷಯವಾಗಿ ಬೇಕೆಂದೇ ನಾಟಕ ಮಾಡುತ್ತಿದ್ದಾರೆ. ಎಲ್ಕೆಜಿ-ಯುಕೆಜಿ ಮಕ್ಕಳಂತೆ ಕಿತ್ತಾಡುತ್ತಿದ್ದಾರೆ. ಇಬ್ಬರೂ ಸಹ ರಾಜ್ಯ ಮತ್ತು ದೇಶದ ನಿಜವಾದ ಸಮಸ್ಯೆಯನ್ನು ಮರೆಮಾಚಲು ಹೀಗೆ ನಾಟಕ ಸೃಷ್ಟಿಸಿದ್ದಾರೆ’ ಎಂದಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಸ್ಪರ್ಧೆ ಮಾಡಲಿದ್ದಾರೆ.